ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅತ್ಯಾಚಾರಿಗಳು ಹಾಗೂ ಉಗ್ರರಿಗೆ ಮೊಬೈಲ್ ಫೋನ್ ಸೌಲಭ್ಯ ಸೇರಿ ರಾಜಾತಿಥ್ಯ ಕಲ್ಪಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಾರಾಗೃಹದಲ್ಲಷ್ಟೇ ಭಯೋತ್ಪಾದಕರಿಲ್ಲ, ಅದಕ್ಕಿಂತಲೂ ಅಪಾಯಕಾರಿ ಭಯೋತ್ಪಾದಕರು ವಿಧಾನಸೌಧದಲ್ಲಿಯೇ ಇದ್ದಾರೆ ಎಂದು ಆರೋಪಿಸಿದರು.
ಇಂದು ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಹಾಗೂ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಪಾತಕಿಗಳಿಗೆ ಜೈಲು ಸಿಬ್ಬಂದಿ ರಾಜಾತಿಥ್ಯ ನೀಡುತ್ತಿರುವುದು ನಾಚಿಕೆಗೇಡು. ಭಯೋತ್ಪಾದಕರು ಕೇವಲ ಕಾರಾಗೃಹದಲ್ಲಿ ಮಾತ್ರವಷ್ಟೇ ಇಲ್ಲ, ಅವರಿಗಿಂತ ಅಪಾಯಕಾರಿ ಭಯೋತ್ಪಾದಕರು ವಿಧಾನಸೌಧದಲ್ಲೂ ಇದ್ದಾರೆ, ಅವರು ಯಾರು ಎನ್ನುವುದು ನನಗಿಂತ ಹೆಚ್ಚಾಗಿ ನಿಮಗೆ ಗೊತ್ತಿದೆ ಎಂದರು.ರಾಜ್ಯದ ಜನ ಈ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ಕೊಡಲಾಗುತ್ತಿದೆ ಎನ್ನುವುದು ಹಳೆಯ ವಿಚಾರವಲ್ಲ. ಹಿಂದೆ ಇದೇ ವಿಷಯದ ಬಗ್ಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಕಿತ್ತಾಡಿಕೊಂಡಿದ್ದರು. ಆಮೇಲೆ ಇನ್ನೊಂದು ಪ್ರಕರಣದಲ್ಲಿ ಸ್ವತಃ ನ್ಯಾಯಾಲಯಗಳೇ ಇಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಲು ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿತ್ತು. ಅದಾದ ನಂತರ ಮತ್ತೆ ಅಂಥವೇ ಪ್ರಕರಣಗಳು ಜೈಲಿನಲ್ಲಿ ಮರುಕಳಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
Laxmi News 24×7