ಬೆಂಗಳೂರು: ದಕ್ಷಿಣ ಕನ್ನಡದ ಬಜ್ಪೆ ಬಳಿ ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಂಧಿತ 11 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ಬಂಧಿತ ಆರೋಪಿಗಳಾದ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್, ನೌಶಾದ್, ಆದಿಲ್ ಮಹರೂಫ್, ಕಲಂದರ್ ಶಫಿ, ಎಂ.ನಾಗರಾಜ, ರಂಜಿತ್, ಮಹಮ್ಮದ್ ರಿಜ್ವಾನ್, ಅಜರುದ್ದೀನ್ ಮತ್ತು ಅಬ್ದುಲ್ ಖಾದರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ 1967, ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಶಸ್ತ್ರಾಸ್ತ್ರ ಕಾಯ್ದೆ 1959ರ ವಿವಿಧ ವಿಭಾಗಗಳ ಅಡಿಯಲ್ಲಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ದೋಷಾರೋಪ ಪಟ್ಟಿಯಲ್ಲಿರುವ ಮಾಹಿತಿ: ಸುಹಾಸ್ ಶೆಟ್ಟಿಯ ಚಲನವಲನಗಳನ್ನು ಹಲವು ತಿಂಗಳುಗಳ ಕಾಲ ಆರೋಪಿಗಳು ಸೂಕ್ಷ್ಮವಾಗಿ ಗಮನಿಸಿದ್ದರು. 2025ರ ಮೇ 1ರಂದು ಮಾರಕಾಸ್ತ್ರಗಳ ಸಹಿತವಾಗಿ ಎರಡು ಕಾರುಗಳಲ್ಲಿ ಬಂದಿದ್ದ 7 ಆರೋಪಿಗಳು ಸುಹಾಸ್ ಶೆಟ್ಟಿಯ ಇನ್ನೋವಾ ಕಾರನ್ನು ಹಿಂಬಾಲಿಸಿದ್ದರು. ಕಿನ್ನಿಪದವು ಬಳಿ ಉದ್ದೇಶಪೂರ್ವಕವಾಗಿ ಸುಹಾಸ್ ಶೆಟ್ಟಿಯ ಕಾರಿಗೆ ಅಪಘಾತವೆಸಗುವ ಮೂಲಕ ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿದ್ದರು. ಬಳಿಕ ಕಾಲ್ನಡಿಗೆಯಲ್ಲಿ ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಸುಹಾಸ್ ಶೆಟ್ಟಿಯನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದರು. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ದ ಮಾಜಿ ಸದಸ್ಯ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಹಾಗೂ ನೌಶಾದ್ ಸೇರಿ ಹತ್ಯೆಯ ಸಂಚು ರೂಪಿಸಿದ್ದರು. ಈ ಕೃತ್ಯಕ್ಕಾಗಿ ಇತರರನ್ನ ನೇಮಿಸಿಕೊಳ್ಳಲು ಅಗತ್ಯವಿರುವ ಹಣವನ್ನು ಮಾಜಿ ಕೆಎಫ್‌ಡಿ ಮತ್ತು ಪಿಎಫ್‌ಐ ಸದಸ್ಯ ಆದಿಲ್ ಮಹರೂಫ್ ಒದಗಿಸಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಆರೋಪಿ ಅಬ್ದುಲ್ ವಿರುದ್ಧ ತನಿಖೆ: ಸಮಾಜದಲ್ಲಿ ಭಯ ಹುಟ್ಟುಹಾಕಲು ಮತ್ತು ಭಯೋತ್ಪಾದನೆಯನ್ನು ಹರಡುವ ಉದ್ದೇಶದಿಂದ ಸಾರ್ವಜನಿಕರ ಮುಂದೆಯೇ ಈ ಕೃತ್ಯ ನಡೆಸಲಾಗಿತ್ತು ಎಂದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಬಂಧಿತ ಮತ್ತೋರ್ವ ಆರೋಪಿ ಅಬ್ದುಲ್ ರಜಾಕ್ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					