ಬೆಂಗಳೂರು: ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್ ವುಡ್ ಮರದ ಕೆತ್ತನೆ ಚೌಕಟ್ಟು, ಶಾಸಕರ ಭವನದ ಕೊಠಡಿಗಳಿಗೆ ಸ್ಮಾರ್ಟ್ ಡೋರ್ ಒಳಗೊಂಡಂತೆ ಇನ್ನಿತರ ಸೌಲಭ್ಯ ಕಲ್ಪಿಸಲು ಸ್ಪೀಕರ್ ಯು.ಟಿ.ಖಾದರ್ ಅನಗತ್ಯವಾಗಿ ಟೆಂಡರ್ ಕರೆದು ದುಂದುವೆಚ್ಚ ಮಾಡಿರುವ ಆರೋಪಗಳ ಕುರಿತು ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಗಳಿಂದ ಆ ಸ್ಥಾನವು ಮುಕ್ತವಾಗಬೇಕು. ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್ ವುಡ್‍ನ ಮರದ ಕೆತ್ತನೆಯ ಚೌಕಟ್ಟು, ಸಭಾಂಗಣಕ್ಕೆ ಹೊಸ ಟಿ.ವಿ.ಸೆಟ್ ಅಳವಡಿಸಿ ಇದಕ್ಕೆ ಎಐ ಮಾನಿಟರ್ ಸಿಸ್ಟಂ ಹಾಕಲು ಸಾಕಷ್ಟು ಖರ್ಚು ವೆಚ್ಚಗಳಾಗಿವೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಹೋಲಿಕೆಯ ಗಡಿಯಾರಗಳನ್ನು ಕೊಟ್ಟಿದ್ದಾರೆ. ವಿಧಾನಸಭೆಯ ಮೊಗಸಾಲೆಯಲ್ಲಿ ಯಂತ್ರ ಅಳವಡಿಸಿ ಮಸಾಜ್ ಪಾರ್ಲರ್ ಮಾದರಿಯಲ್ಲಿ ಬದಲಾಯಿಸಿದ್ದಾರೆ. ಅಲ್ಲದೇ, ಸ್ಪೀಕರ್ ಕಾರ್ಯಾಲಯದ ಟೆಂಡರ್ ಮಂಗಳೂರು ಮೂಲದವರಿಗೆ ಸಿಗುತ್ತಿದೆ. ಇದರಿಂದ ಯು.ಟಿ.ಖಾದರ್ ಭ್ರಷ್ಟ ಕೂಪದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಈ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಗೇರಿ ಆಗ್ರಹಿಸಿದ್ದಾರೆ.
ಊಟ, ಉಪಹಾರ ಅಗತ್ಯವಿತ್ತೇ?: ಅಧಿವೇಶನ ವೇಳೆ ಸರ್ಕಾರದ ಸಚಿವರು, ಶಾಸಕರಿಗೆ ಊಟ ಹಾಗೂ ಉಪಹಾರ ಕೊಡಲು ಸ್ಪೀಕರ್ ಆರಂಭಿಸಿದ್ದು ಸರಿಯೇ ? ಹಾಸು ಹೊದಿಕೆ, ಕಾರ್ಪೆಟ್ ಬದಲಿಸಿದ್ದಲ್ಲದೇ ಸುಣ್ಣ ಬಣ್ಣ ಹೊಡೆಸಿದ್ದರು. ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳಿಗೆ ಭದ್ರತೆ ಹೆಚ್ಚಿಸಲು ಸ್ಮಾರ್ಟ್ ಡೋರ್ ಲಾಕರ್ ಹಾಕಿಸಿದರು. ಸ್ಮಾರ್ಟ್ ಡೋರ್ನ ಮಾರುಕಟ್ಟೆಯಲ್ಲಿ 14 ರಿಂದ 16 ಸಾವಿರವಿದ್ದರೂ 49 ಸಾವಿರಕ್ಕಿಂತ ಹೆಚ್ಚು ಖರ್ಚು ತೋರಿಸಿದ್ದಾರೆ ಎಂದು ದೂರಿದರು.
ಸ್ಮಾರ್ಟ್ ಡೋರ್ ಜೊತೆಗೆ ಸ್ಮಾರ್ಟ್ ಸೇಫ್ ಲಾಕರ್ ಹಾಕಿಸಲು 8-9 ಸಾವಿರಕ್ಕೆ ಸಿಗಲಿದ್ದು, ಇವರು 35 ಸಾವಿರ ದರ ವಿಧಿಸಿದ್ದಾರೆ. ಸುಮಾರು 30 ಸಾವಿರಕ್ಕೆ ಲಭ್ಯ ಇರುವ ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ಗೆ 90,500 ರೂ. ವಿಧಿಸಿದ್ದಾರೆ. ಸ್ಟೇನ್‍ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ ಆನ್‍ಲೈನ್‍ನಲ್ಲಿ 16 ಸಾವಿರದಿಂದ 53 ಸಾವಿರದಲ್ಲಿ ಲಭ್ಯವಿದ್ದು, 65 ಸಾವಿರ ವಿಧಿಸಲಾಗಿದೆ. 123 ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ ಖರೀದಿ ಮಾಡಿದ್ದಾರೆ. 224 ಸೇಫ್ ಲಾಕರ್, ಅಷ್ಟೇ ಸಂಖ್ಯೆಯ ಡೋರ್ ಲಾಕರ್ ಖರೀದಿ ಮಾಡಿದ್ದಾರೆ ಕಾಗೇರಿ ಆರೋಪಿಸಿದರು.
ಪುಸ್ತಕ ಮೇಳಕ್ಕೆ 4.5 ಕೋಟಿ ಖರ್ಚು: 4-5 ದಿನಗಳ ಪುಸ್ತಕ ಮೇಳಕ್ಕೆ 4.5 ಕೋಟಿ ಖರ್ಚು ಮಾಡಿದ್ದಾರೆ. ಪುಸ್ತಕ ಕೊಂಡು ಹಂಚಿದರೂ ಇಷ್ಟಾಗುತ್ತಿತ್ತೇ ಗೊತ್ತಿಲ್ಲ. ಇವರು ಸ್ಟಾಲ್ ಹಾಕುವುದು ಬಿಟ್ಟು ಬೇರೇನೂ ಇಲ್ಲ. ಲೈಟಿಂಗ್ ಮಾಡಿದ್ದಾರೆ. ಶಾಸಕರ ಭವನಕ್ಕೆ ಮಂಚ, ಟೇಬಲ್ ಹಾಕಿಸಿದ್ದಾರೆ. ಸದ್ಯ ಯು.ಟಿ. ಖಾದರ್ ಅವರು ಈಗಲೂ ವಿದೇಶದಲ್ಲಿದ್ದಾರೆ. ಅವರು ಎಷ್ಟು ದೇಶಗಳಿಗೆ ಹೋಗಿದ್ದಾರೆ?. ಸರ್ಕಾರ ಎಷ್ಟು ಹಣ ಕೊಟ್ಟಿದೆ ಎಂದು ಪ್ರಶ್ನಿಸಿದರು.
ನಾನೂ ಸ್ಪೀಕರ್ ಆಗಿ ವಿದೇಶಗಳಿಗೆ ಹೋಗಿದ್ದೇನೆ. ಅವಕಾಶ ಮೀರಿ ಅವರು ಎಷ್ಟು ಪ್ರವಾಸ ಮಾಡಿದ್ದಾರೆ? ಯಾರ್ಯಾರ ಜೊತೆ ಪ್ರವಾಸ ಮಾಡಿದ್ದಾರೆ? ಇವೆಲ್ಲವೂ ಬಹಿರಂಗಗೊಳ್ಳಬೇಕಿದೆ. ವಿದೇಶಗಳ ಅಧ್ಯಯನದ ಹೆಸರಿನಲ್ಲಿ ನಡೆದ ಪ್ರವಾಸದ ವಿವರ ಬಹಿರಂಗಗೊಳಿಸಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ವಿಧಾನಸಭಾಧ್ಯಕ್ಷರಾಗಿ ರಾಜಕೀಯ, ಸಾರ್ವಜನಿಕ ಜೀವನದ ಸಾಕಷ್ಟು ಅನುಭವ ಇರುವ ಯು.ಟಿ.ಖಾದರ್ ಅವರು ಸ್ಪೀಕರ್ ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಆಡಳಿತ ಸುಧಾರಣೆ ಹೆಸರಿನಲ್ಲಿ ಅನೇಕ ಭ್ರಷ್ಟಾಚಾರಗಳು ನಡೆಯುತ್ತಿವೆ ಎಂದು ಆರೋಪಿಸಿದರು.
Laxmi News 24×7