ಧಾರವಾಡ: “ನಾನು ಸಿಎಂ ಆಗಿದ್ದಾಗ ಶಿಕ್ಷಣ ಇಲಾಖೆ ಜಾಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶವದು. ಆ ಆದೇಶದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್ ಪದ ಬಳಸಿಲ್ಲ” ಎಂದು ಸಂಸದ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸಿಎಂ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, RSS ವಿಚಾರದಲ್ಲಿ ತಮ್ಮ ಮೇಲಿನ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ” 2013ರಲ್ಲಿ ಬಿಜೆಪಿಯೇ ಈ ಆದೇಶ ಮಾಡಿತ್ತು ಅಂತಾರೆ. ನಾನು ಸಿಎಂ ಇದ್ದಾಗಿನ ಆದೇಶವನ್ನೇ ಮುಂದುವರೆಸಿರುವುದಾಗಿ ಹೇಳುತ್ತಾರೆ. ಅವತ್ತು ಆಗಿದ್ದ ಆದೇಶವನ್ನು ಸರಿಯಾಗಿ ಅವರು ಓದಿದ್ದಾರಾ?. ಆದೇಶದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್ ಪದ ಬಳಸಿಲ್ಲ. ನಮ್ಮ ಕ್ಯಾಬಿನೆಟ್ ಸಭೆಯಲ್ಲಿ ಮಾಡಿದ್ದ ಆದೇಶವಲ್ಲ. ಯಾವುದೋ ಒಂದು ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಜಾಗ ಕೇಳಿದ್ದರು. ಶಿಕ್ಷಣ ಇಲಾಖೆ ಜಾಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಆಗ ಶಿಕ್ಷಣ ಇಲಾಖೆ ಅಧಿಕಾರಿಗಳು ಡಿಡಿಪಿಐಗೆ ಬರೆದಿರುವ ಆದೇಶವದು. ಇನ್ನಾದರು ನಾಟಕ ಮಾಡೋದನ್ನು ಬಿಡಿ” ಎಂದು ವಾಗ್ದಾಳಿ ಮಾಡಿದರು.
“ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಏಕೆ ಮಾತಾಡುತ್ತಾರೆ? ಅವರು ಸಾರ್ವಜನಿಕ ಸ್ಥಳದಲ್ಲಿ ಸಂಘದ ಚಟುವಟಿಕೆ ಮಾಡಬಾರದು ಅಂತಾ ಹೇಳಿದ್ದಾರೆ. ನಿಮಗೆ ಧೈರ್ಯವಿದ್ದರೆ ಅಂಥ ಸ್ಥಳಗಳಲ್ಲಿ ಸಂಘದ ಚಟುವಟಿಕೆ ಬ್ಯಾನ್ ಮಾಡಿ. ಹಾಗೆ ಮಾಡಲು ಸಾಧ್ಯವಿಲ್ಲ. ಅದು ಕಾನೂನು ಬಾಹಿರ ಕೆಲಸವಾಗುತ್ತದೆ. ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದೆ” ಎಂದು ಉತ್ತರಿಸಿದರು.
ಸರ್ಕಾರಿ ನೌಕರರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವ ವಿಚಾರ: “ಪ್ರಿಯಾಂಕ್ ಖರ್ಗೆ ಮತ್ತೊಂದು ಪತ್ರ ಬರೆದಿದ್ದಾರೆ. ಅದರಲ್ಲಿ ಸರ್ಕಾರಿ ನೌಕರರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ನೀವು (ಸಿಎಂ) ಯಾವ ನಿರ್ಧಾರ ತೆಗೆದುಕೊಂಡಿರಿ? ನಿಮಗೆ ನಿರ್ಧಾರ ತೆಗೆದುಕೊಳ್ಳಲು ಅಧಿಕಾರವೇ ಇಲ್ಲ. ಈ ಅಧಿಕಾರ ಇರುವುದು ಕೇಂದ್ರಕ್ಕೆ ಮಾತ್ರ. 1966ರಲ್ಲಿ ನೆಹರು RSS ಮತ್ತು ಇಸ್ಲಾಂ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು ಅಂತಾ ಆದೇಶ ಮಾಡಿದ್ದರು. 1970ರಲ್ಲಿ ಅದು ಕೊಂಚ ತಿದ್ದುಪಡಿಯಾಗಿದ್ದು, 1980ರಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಲಾಗಿದೆ. ಮೋದಿ ಪ್ರಧಾನಿ ಅವರು ಜು. 9, 2024ರಲ್ಲಿಸಂಘದ ಚಟುವಟಿಕೆ ಮಾಡುವ ಬಗ್ಗೆ ಮತ್ತೊಂದು ಆದೇಶ ಮಾಡಿದ್ದಾರೆ. ಅದರಲ್ಲಿ ಹಿಂದಿನ ಆದೇಶದಲ್ಲಿದ್ದ RSS ಹೆಸರನ್ನು ತೆಗೆಯಲಾಗಿದೆ. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಆದೇಶವಾಗಿದೆ. ಸಂಘದ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ತೊಂದರೆ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ರೀತಿ ಆದೇಶಿಸಲು ಅಧಿಕಾರವಿಲ್ಲ. ಲಿಂಗಸೂರಿನಲ್ಲಿ ಪಿಡಿಒರನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ. ಈ ಆದೇಶದ ಪ್ರಕಾರ ಅಮಾನತು ಮಾಡುವಂತಿಲ್ಲ. ಕೂಡಲೇ ಅಮಾನತು ಆದೇಶವನ್ನು ಹಿಂಪಡೆಯಬೇಕು. ಕೋರ್ಟ್‌ಗೆ ಹೋದರೆ ಸರ್ಕಾರದ ಆದೇಶ ವಜಾ ಆಗುತ್ತದೆ” ಎಂದರು.
ಚಿತ್ತಾಪುರ ಘಟನೆ: “ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಪಡೆಯುವ ಚಿತ್ತಾಪುರದ ಘಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆಗೆ ಏನಾಗಿದೆಯೋ ಗೊತ್ತಿಲ್ಲ. ಸಿದ್ದು ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚಿತ್ತಾಪುರ ಪಥಸಂಚಲನದಲ್ಲಿ ಸಾವಿರಾರು ಯುವಕರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಇದರ ಜನಪ್ರಿಯತೆಯನ್ನು ಸಿಎಂಗೂ, ಪ್ರಿಯಾಂಕ್ ಖರ್ಗೆಗೆ ಸಹಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಚಿತ್ತಾಪುರದಲ್ಲಿ ತಡೆಯುವ ಪ್ರಯತ್ನ ಮಾಡಿದರು. ಧ್ವಜಗಳನ್ನು ಕಿತ್ತು ಹಾಕಿದರು. ಪ್ರಿಯಾಂಕ್ ಖರ್ಗೆ ಅಹಂಕಾರದಿಂದ ಅಶಾಂತಿ ಆಗುತ್ತಿದೆ. ಹಿಂದೂ ಸಮಾಜವನ್ನು ಒಡೆಯುವುದು, ಲಿಂಗಾಯತ ಸಮಾಜವನ್ನು ಒಡೆಯುವುದು, ಅಲ್ಪಸಂಖ್ಯಾತರ ತುಷ್ಠೀಕರಣ ಸಿದ್ದರಾಮಯ್ಯನವರ ಉದ್ದೇಶ. ಇದರಿಂದಾಗಿ ಸಮಾಜ ಹಾಳಾಗುತ್ತಿದೆ. ನೀವು RSS ಎದುರು ಹಾಕಿಕೊಂಡಿದ್ದೀರಿ. ಹಿಂದುತ್ವ ಉಳಿಸುವ, ರಾಷ್ಟ್ರ ಕಟ್ಟುವ ಕೆಲಸ RSS ಮಾಡುತ್ತಿದೆ. ಅವರನ್ನು ಎದುರು ಹಾಕಿಕೊಂಡರೆ ಭಸ್ಮ ಆಗುತ್ತೀರಿ. ಸಿದ್ದರಾಮಯ್ಯ ಸರ್ಕಾರದ ಅಂತಿಮ ಕ್ಷಣ ಬಂದಿದೆ. ದೀಪ ಆರುವಾಗ ಜೋರಾಗಿ ಉರಿಯುತ್ತದೆ. ಸಿದ್ದರಾಮಯ್ಯ ಅವರದ್ದೂ ಅದೇ ರೀತಿ ಆಗಿದೆ” ಎಂದು ಶೆಟ್ಟರ್ ಟೀಕಿಸಿದರು.