ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಈ ವೇಳೆ ಕೆಲವರು ನಾಮಪತ್ರ ಹಿಂಪಡೆಯುವ ಮೂಲಕ ಒಟ್ಟು 9 ಅಭ್ಯರ್ಥಿಗಳ ಅವಿರೋಧ ಆಯ್ಕೆ ಸ್ಪಷ್ಟವಾಗಿದೆ. ಇನ್ನುಳಿದಂತೆ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚಿಕ್ಕೋಡಿ ತಾಲೂಕಿನಿಂದ ಗಣೇಶ ಹುಕ್ಕೇರಿ, ಗೋಕಾಕ್ನಲ್ಲಿ ಅಮರನಾಥ್ ಜಾರಕಿಹೊಳಿ, ಸವದತ್ತಿಯಲ್ಲಿ ವಿರೂಪಾಕ್ಷ ಮಾಮನಿ, ಯರಗಟ್ಟಿಯಿಂದ ವಿಶ್ವಾಸ ವೈದ್ಯ ಹಾಗೂ ಗೋಕಾಕ್ನಿಂದ ಅಮರನಾಥ್ ಜಾರಕಿಹೊಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಈ ನಾಲ್ವರ ಅವಿರೋಧ ಆಯ್ಕೆ ಮೊನ್ನೆಯೇ ಖಚಿತವಾಗಿತ್ತು. ಇದರ ಜೊತೆಗೆ ಇಂದು ಇತರ ಕ್ಷೇತ್ರದಿಂದ ಚನ್ನರಾಜ ಹಟ್ಟಿಹೊಳಿ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದ ಹಿನ್ನೆಲೆಯಲ್ಲಿ ಚನ್ನರಾಜ ಅವರ ಅವಿರೋಧ ಆಯ್ಕೆಯೂ ಖಚಿತವಾಗಿದೆ.
ಅದೇ ರೀತಿ, ಕಾಗವಾಡದಿಂದ ರಾಜು ಕಾಗೆ, ಖಾನಾಪುರದಿಂದ ಅರವಿಂದ ಪಾಟೀಲ, ಬೆಳಗಾವಿಯಲ್ಲಿ ರಾಹುಲ್ ಜಾರಕಿಹೊಳಿ ಹಾಗೂ ಮೂಡಲಗಿಯಲ್ಲಿ ನೀಲಕಂಠ ಕಪ್ಪಲಗುದ್ದಿ ಅವರ ವಿರುದ್ಧ ನಾಮಪತ್ರ ಸಲ್ಲಿಸಿದವರು ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ನಾಲ್ವರ ಅವಿರೋಧ ಆಯ್ಕೆ ನಿಶ್ಚಿತವಾಗಿದೆ. ಒಟ್ಟು ಅವಿರೋಧ ಆಯ್ಕೆ ಆದ 9 ಅಭ್ಯರ್ಥಿಗಳ ಪೈಕಿ 7 ಬಾಲಚಂದ್ರ ಜಾರಕಿಹೊಳಿ ಪೆನಲ್, ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ. ಅವಿರೋಧ ಆಯ್ಕೆಯಾದವರು ಆಗಮಿಸಿ ತಮ್ಮ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಡಿಸಿಸಿ ಬ್ಯಾಂಕ್ ಮುಂದೆ ಗೆದ್ದವರ ಅಭಿಮಾನಿಗಳು ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.
ಇಂದು ಒಟ್ಟಾರೆ 20 ನಾಮಪತ್ರಗಳನ್ನು ವಾಪಸ್ ಪಡೆಯಲಾಗಿದೆ. ಇದರೊಂದಿಗೆ, 7 ತಾಲೂಕುಗಳಲ್ಲಿ ನಡೆಯಲಿರುವ ಚುನಾವಣಾ ಕಣದಲ್ಲಿ ಒಟ್ಟು 14 ಮಂದಿ ಸ್ಪರ್ಧಿಗಳಿದ್ದಾರೆ.
ಕಣದಲ್ಲಿರುವ ಪ್ರಮುಖರು:
ಹುಕ್ಕೇರಿ: ರಮೇಶ ಕತ್ತಿ-ರಾಜೇಂದ್ರ ಪಾಟೀಲ
ಅಥಣಿ: ಲಕ್ಷ್ಮಣ ಸವದಿ-ಮಹೇಶ ಕುಮಠಳ್ಳಿ
ನಿಪ್ಪಾಣಿ: ಅಣ್ಣಾಸಾಹೇಬ ಜೊಲ್ಲೆ-ಉತ್ತಮ ಪಾಟೀಲ
ಬೈಲಹೊಂಗಲ: ಮಹಾಂತೇಶ ದೊಡ್ಡಗೌಡರ-ಡಾ.ವಿಶ್ವನಾಥ ಪಾಟೀಲ
ಕಿತ್ತೂರು: ನಾನಾಸಾಹೇಬ ಪಾಟೀಲ-ವಿಕ್ರಮ್ ಇನಾಮದಾರ್
ರಾಮದುರ್ಗ: ಮಲ್ಲಣ್ಣ ಯಾದವಾಡ-ಎಸ್.ಎಸ್.ಢವಣ