ಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ಯೋಜನೆಯಡಿಯ ಭೂಸ್ವಾಧೀನ, ಪುನರ್ವಸತಿಗಾಗಿ ಪರಿಹಾರ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ವಾರ್ಷಿಕ 18,000 ಕೋಟಿ ರೂ.ರಂತೆ ನಾಲ್ಕು ವರ್ಷದ ಬಜೆಟ್ನಲ್ಲಿ ಅನುದಾನ ಹಂಚಿಕೆ ಮಾಡಿ ಪರಿಹಾರ ನೀಡಲು ತೀರ್ಮಾನಿಸಿದೆ. ಆದರೆ, ಈ ಹಣ ಹೊಂದಿಸಲು ಪಂಚ ಗ್ಯಾರಂಟಿ, ಕೃಷಿ ಐಪಿ ಸೆಟ್ ಸಹಾಯಧನಕ್ಕೆ ಕತ್ತರಿ ಹಾಕುವ ಆಯ್ಕೆ ಸೇರಿದಂತೆ ಮೂರು ಕಠಿಣ ಆಯ್ಕೆಗಳನ್ನು ಹಣಕಾಸು ಇಲಾಖೆ ಸರ್ಕಾರದ ಮುಂದಿಟ್ಟಿದೆ.
ಮಹತ್ವಾಕಾಂಕ್ಷೆಯ ಕೃಷ್ಣ ಮೇಲ್ದಂಡೆ ಯೋಜನೆ-3ರ ಭೂಸ್ವಾಧೀನಕ್ಕಾಗಿ ರಾಜ್ಯ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಕೃಷ್ಣ ಮೇಲ್ದಂಡೆ ಯೋಜನೆ ಹಂತ -3ರಲ್ಲಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟ 519 ಮೀಟರ್ನಿಂದ 524 ಮೀಟರ್ಗೆ ಎತ್ತರಿಸುವುದರಿಂದ ಹೆಚ್ಚುವರಿಯಾಗಿ 100 ಟಿಎಂಸಿ ನೀರಿನ ಪ್ರಮಾಣ ಸಂಗ್ರಹ ಅಂದಾಜಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಒಟ್ಟು 1,33,867 ಎಕರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಇದರಲ್ಲಿ 75,563 ಎಕರೆ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನು ಸೇರಿದೆ. ಇದುವರೆಗೆ 29,566 ಎಕ್ರೆ ಭೂಸ್ವಾಧೀನ ತೀರ್ಪು ಹೊರಡಿಸಲಾಗಿದೆ. 59,354 ಎಕ್ರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದೆ.
ಮುಳುಗಡೆ ಹೊಂದಲಿರುವ ಜಮೀನನ್ನು ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಲು ತೀರ್ಮಾನಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ 51,148 ಕೋಟಿ ರೂ. ಯೋಜನಾ ಮೊತ್ತ ಅಂದಾಜಿಸಲಾಗಿತ್ತು. ಈಗ ಪರಿಷ್ಕೃತ ರೂ. 87,818 ಕೋಟಿ ರೂ. ಅಂದಾಜಿಸಲಾಗಿದೆ. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ರೂ. 17,627 ಕೋಟಿ ಆರಂಭದಲ್ಲಿ ಅಂದಾಜಿಸಲಾಗಿತ್ತು. ಪ್ರಸ್ತುತ ಪರಿಷ್ಕೃತ ಮೊತ್ತ 40,557.09 ಕೋಟಿ ರೂಪಾಯಿ ಅಂದಾಜಿಸಲಾಗಿದೆ.
ನಾಲ್ಕು ವರ್ಷಗಳಲ್ಲಿ ಒಟ್ಟು 75,000 ಕೋಟಿ ಅನುದಾನ: ಯೋಜನೆ ಭೂಸ್ವಾಧೀನ ಮತ್ತು ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯಕ್ರಮಕ್ಕೆ ಅಗತ್ಯ ಇರುವ ಹೆಚ್ಚುವರಿ ಸುಮಾರು 75,000 ಕೋಟಿ ರೂ. ಮೊತ್ತವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಭರಿಸಲು ಸುಮಾರು ರೂ.18,000 ಕೋಟಿ ವಾರ್ಷಿಕ ಅನುದಾನವನ್ನು ಜಲಸಂಪನ್ಮೂಲ ಇಲಾಖೆಗೆ ಆಯವ್ಯಯದಲ್ಲಿ ಸೂಕ್ತವಾಗಿ ಕಲ್ಪಿಸಲು ತೀರ್ಮಾನಿಸಲಾಗಿದೆ.
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ 75,563 ಎಕರೆ ಮುಳುಗಡೆಯಾಗುವ ಭೂಮಿಗಾಗಿ 519.60 ಮೀಟರ್ನಿಂದ 524.256 ಮೀಟರ್ವರೆಗೆ ಒಂದೇ ಹಂತದಲ್ಲಿ ಒಪ್ಪಂದದ ದರ ಅಥವಾ ಭೂ ಖರೀದಿ ಮುಖಾಂತರ ಭೂಸ್ವಾಧೀನ ಮಾಡಲು ಆದೇಶಿಸಲಾಗಿದೆ. ಮುಳುಗಡೆ ಜಮೀನುಗಳ ಭೂಸ್ವಾಧೀನ ಸಂಬಂಧ ಖುಷ್ಕಿ (ಒಣ) ಭೂಮಿಗೆ ಪ್ರತಿ ಎಕರೆಗೆ 30 ಲಕ್ಷ ರೂ., ತರಿ ಜಮೀನಿಗೆ (Wet Land)ಗೆ ಪ್ರತಿ ಎಕರೆಗೆ 40 ಲಕ್ಷ ರೂ. ಪರಿಹಾರ ನಿಗದಿ ಮಾಡಲಾಗಿದೆ. ಇತ್ತ ಕಾಲುವೆ ಜಮೀನುಗಳ ಭೂಸ್ವಾಧೀನಕ್ಕಾಗಿ ಖುಷ್ಕಿ (ಒಣ) ಭೂಮಿಗೆ ಪ್ರತಿ ಎಕರೆಗೆ 25 ಲಕ್ಷ ರೂ. ಮತ್ತು ತರಿ ಜಮೀನಿಗೆ (Wet Land) ಪ್ರತಿ ಎಕರೆಗೆ 30 ಲಕ್ಷ ರೂ. ಪರಿಹಾರ ನಿಗದಿ ಮಾಡಿ ಆದೇಶಿಸಲಾಗಿದೆ.