ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ನಿತ್ಯವೂ ಮನೆ ಮನೆಯಿಂದ ಕಸ ಸಂಗ್ರಹಿಸಲು ಆಟೋ ಟಿಪ್ಪರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಈ ಟಿಪ್ಪರ್ಗಳು ನಿತ್ಯ ನಗರದ ಎಲ್ಲ ಮಾರ್ಕೆಟ್ ಹಾಗೂ ಬಡಾವಣೆಯಲ್ಲಿ ಕಸ ಸಂಗ್ರಹ ಮಾಡುತ್ತವೆ. ಈ ಟಿಪ್ಪರ್ ಗಳಿಂದ ವಾಣಿಜ್ಯ ಜಾಹೀರಾತು ಪ್ರಸಾರಕ್ಕೆ ಬಳಕೆ ಮಾಡುವ ಮೂಲಕ ಆದಾಯಗಳಿಸಲು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ.
ಅವಳಿ ನಗರದಲ್ಲಿ 300ಕ್ಕೂ ಹೆಚ್ಚಿರುವ ಆಟೋ ಟಿಪ್ಪರ್‌ಗಳಲ್ಲಿ ಈಗಾಗಲೇ ಆಡಿಯೋ ಸಂದೇಶವನ್ನು ಪ್ರಸಾರ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆ ಆಸ್ತಿ ತೆರಿಗೆ, ಸ್ವಚ್ಚತೆ ಕಾಪಾಡುವುದು, ಹಸಿ ಕಸ, ಒಣಕಸ ಪ್ರತ್ಯೇಕಿಸುವುದು ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಆಡಿಯೋ ಪ್ರಸಾರ ಮಾಡಲಾಗುತ್ತಿದೆ.ಈಗ ಇದೇ ಟಿಪ್ಪರ್‌ಗಳ ಮೂಲಕ ಖಾಸಗಿ ಕಂಪನಿಗಳ ಆಡಿಯೋ ಜಾಹೀರಾತು ಮತ್ತು ಬಾಡಿ ಬ್ರಾಂಡಿಂಗ್‌ಗೆ ತೆರೆದುಕೊಳ್ಳಲಿದೆ. ನಿತ್ಯ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಟೋ ಟಿಪ್ಪರ್‌ಗಳ ಮೂಲಕ ಕಸ ಸಂಗ್ರಹ ಮಾಡಲಾಗುತ್ತದೆ. ಈ ವಾಹನಗಳಲ್ಲಿ ಆಡಿಯೋ ಸಿಸ್ಟಮ್ ಅಳವಡಿಸಿ ವಾಣಿಜ್ಯ ಜಾಹೀರಾತುಗಳನ್ನು ಪ್ರಸಾರ ಮಾಡುವುದು ಸೂಕ್ತವೆಂದು ಪಾಲಿಕೆ ಮನಗಂಡಿದೆ.