ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿಯವರು ಹೇಳಿದರು.
ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ್ದ ಮೂಡಲಗಿ ವಲಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ವಿತರಿಸಿ ಅವರು ಮಾತನಾಡಿದರು.
ಮೂಡಲಗಿ ವಲಯದಲ್ಲಿ ಮಕ್ಕಳ ಸಾಧನೆಗಳಾಗಲಿ, ಅಥವಾ ಪರೀಕ್ಷೆಗಳಾಗಲಿ ಗಮನಾರ್ಹವಾಗಿದೆ. ಮೂಡಲಗಿ ವಲಯವು ಜಿಲ್ಲಾ ಮತ್ತು ರಾಜ್ಯದಲ್ಲಿಯೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮಕ್ಕಳು ಕೂಡ ಹೆಮ್ಮೆಯ ಸಾಧನೆಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಮೂಡಲಗಿ ಶೈಕ್ಷಣಿಕ ವಲಯವು ಧಾರವಾಡ ವಲಯದಲ್ಲಿಯೇ ಮೂರನೇ ಸ್ಥಾನ ಪಡೆದಿದೆ. ಸರ್ಕಾರಿ ಶಾಲೆಗಳಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಕ್ಕಳು ನಮ್ಮ ವಲಯದಲ್ಲಿ ವ್ಯಾಸಂಗ ಮಾಡುತ್ತಿರುವುದು ಉತ್ತಮ ಉದಾಹರಣೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಮ್ಮ ಸ್ವಂತ ಅನುದಾನದಲ್ಲಿ ಇದೇ ವರ್ಷದ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ 14.12 ಲಕ್ಷ ರೂಪಾಯಿಗಳನ್ನು 56 ಜನ ಅತಿಥಿ ಶಿಕ್ಷಕರಿಗೆ ವಿತರಿಸಲಾಯಿತು.
ಬಾಗಲಕೋಟ ಡಿಡಿಪಿಐ ಅಜೀತ ಮನ್ನಿಕೇರಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ವೇದಿಕೆಯಲ್ಲಿ ಗೋಕಾಕ ತಹಶೀಲ್ದಾರ ಡಾ. ಮೋಹನ್ ಭಸ್ಮೆ, ಮೂಡಲಗಿ ಸಿಡಿಪಿಓ ಯಲ್ಲಪ್ಪ ಗದಾಡಿ, ಗೋಕಾಕ ಬಿಇಓ ಜಿ.ಬಿ.ಬಳಗಾರ, ಬಾಗಲಕೋಟ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಾಗೆನ್ನವರ, ಮೂಡಲಗಿ ವಲಯದ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.