ಹಾವೇರಿ: ನಗರದ ಸಮೀಪ ಇರುವ ಹೆಗ್ಗೇರಿ ಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಕೆರೆಯನ್ನು ನಳ ಮಹಾರಾಜ ಕಟ್ಟಿಸಿದ ಎಂಬ ಪ್ರತೀತಿ ಇದೆ. ಅಲ್ಲದೆ, ದಕ್ಷಿಣ ಭಾರತದ ರಾಜ ಮನೆತನಗಳಲ್ಲಿ ಒಂದಾದ ಚೋಳರ ಕಾಲದಲ್ಲಿ ಈ ಕೆರೆ ಕಟ್ಟಲ್ಪಟ್ಟಿತು ಎಂಬ ಇತಿಹಾಸವಿದೆ. ಆದರೆ, ಈ ಕೆರೆ ಈಗ ಒತ್ತುವರಿಗೆ ತುತ್ತಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಅಖಂಡ ಧಾರವಾಡ ಜಿಲ್ಲೆಯಿದ್ದಾಗಲೇ ಹೆಗ್ಗೇರಿ ಹಾವೇರಿ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿತ್ತು. ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗುತ್ತಿದ್ದ ಈ ಕೆರೆ ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಸುಧಾರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿತ್ತು. ಅಲ್ಲದೆ, ಈ ಕೆರೆಯ ನೀರನ್ನೇ ಅವಲಂಬಿಸಿದ್ದ ಸಾವಿರಾರು ರೈತರು ನೀರಾವರಿ ಮಾಡುತ್ತಿದ್ದರು.
1250 ಎಕರೆಯಿಂದ 681 ಎಕರೆಗೆ ಕುಸಿದ ವಿಸ್ತೀರ್ಣ: ಹಾವೇರಿ ಹೆಗ್ಗೇರಿ ಒಂದು ಕಾಲದಲ್ಲಿ ಸುಮಾರು 1250 ಎಕರೆ ವಿಸ್ತೀರ್ಣ ಹೊಂದಿತ್ತು. ನಮ್ಮ ತಾತ ಮುತ್ತಾತರ ಕಾಲದಿಂದ ಕೆರೆ ವಿಸ್ತೀರ್ಣದಿಂದ ಖ್ಯಾತಿಯಾಗಿತ್ತು. ಆದರೆ ಪ್ರಸ್ತುತ ಹಲವು ವರ್ಷಗಳಿಂದ ಕೆರೆ ಒತ್ತುವರಿಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಒಂದು ಕಾಲದಲ್ಲಿ 1250 ಎಕರೆ ವಿಸ್ತೀರ್ಣ ಹೊಂದಿದ್ದ ಕೆರೆ ನಂತರ ಸಾವಿರ ಎಕರೆಗೆ ಕುಸಿಯಿತು. ಅದಾದ ನಂತರ 9 ಎಕರೆ ಇದೀಗ 681 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆಯ ದಡ ಹೊಂದಿಕೊಂಡೇ ಇರುವ ಗ್ರಾಮಗಳ ಸುತ್ತ ಕೆರೆ ಒತ್ತುವರಿಯಾಗಿದೆ. ಕೆರೆ ಒತ್ತುವರಿ ತೆರವುಗೊಳಿಸಬೇಕು, ಕೆರೆಯ ವಿಸ್ತೀರ್ಣದ ಸರ್ವೆ ಮಾಡಬೇಕು ಮತ್ತು ಕೆರೆಯ ಸುತ್ತಲೂ ತಡೆಗೋಡೆ ನಿರ್ಮಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕೆರೆ ಹೂಳು ತೆಗೆಯಲು ಒತ್ತಾಯ: ಹೆಗ್ಗೇರಿ ಕೆರೆಯಲ್ಲಿನ ಹೂಳನ್ನು ಸಂಪೂರ್ಣವಾಗಿ ತೆಗೆಯಲಾಗಿಲ್ಲ. ಹೂಳು ತೆಗೆಯುವ ಕಾರ್ಯ ವೈಜ್ಞಾನಿಕವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ 48 ನಿರ್ಮಿಸುವಾಗ ಕೆರೆಯ ಮಣ್ಣನ್ನು ಅಲ್ಲಲ್ಲಿ ಅಗೆದಿದ್ದಾರೆ. ಕೆರೆಯ ಕೆಲವು ಕಡೆ ಮುಳ್ಳುಪೂದೆಗಳು ಬೆಳೆದಿದ್ದು, ಕೆರೆಯ ವಿಸ್ತಾರಕ್ಕೆ ಧಕ್ಕೆ ತಂದಿದೆ. ಅಲ್ಲದೆ, ನಗರಸಭೆ ಕೆಲ ವರ್ಷದ ಹಿಂದೆ ಕೆರೆಯಲ್ಲಿ ಗ್ಲಾಸ್ ಹೌಸ್ ನಿರ್ಮಿಸಲು ಮುಂದಾಗಿತ್ತು. ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಗ್ಲಾಸ್ ಹೌಸ್ ಅವೈಜ್ಞಾನಿಕ ಕಾರಣದಿಂದ ಅರ್ಧಕ್ಕೆ ನಿಂತಿದೆ. ಇಲ್ಲಿ ನಿರ್ಮಾಣವಾಗಬೇಕಿದ್ದ ಗ್ಲಾಸ್ ಹೌಸ್ ನೆಲೋಗಲ್ ಗುಡ್ಡದ ಮೇಲೆ ನಿರ್ಮಾಣವಾಗುತ್ತಿದೆ. ಗ್ಲಾಸ್ ಹೌಸ್ಗಾಗಿ ಕೆರೆಯಲ್ಲಿ ನಿರ್ಮಿಸಿದ ಗೋಡೆ ಸಹ ಕೆರೆಯ ಅಗಾಧತೆಗೆ ಧಕ್ಕೆ ತಂದಿದೆ ಎಂದು ರೈತರು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಮನವಿ: ಈ ಕುರಿತು ರೈತ ಫಕ್ಕೀರಗೌಡ ಗಾಜಿಗೌಡ್ರ ಅವರು ಮಾತನಾಡಿದ್ದು, ‘ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಅವರು ಹೆಗ್ಗೇರಿ ಕೆರೆಗೆ ಬಾಗೀನ ಅರ್ಪಿಸಲು ಬಂದಿದ್ದಾಗಲೇ ಸರ್ವೇ ಮಾಡುವಂತೆ ಒತ್ತಾಯಿಸಿದ್ದೆವು. ಅಲ್ಲಿಂದ ಇಂದಿನವರೆಗೂ ಜಿಲ್ಲಾಡಳಿತ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಹೀಗಾಗಿ, ನಾವು ಸ್ಥಳೀಯರು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಪತ್ರವನ್ನು ಕಳುಹಿಸಿದ್ದೇವೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೆಗ್ಗೇರಿ ಕೆರೆಯ ಸರ್ವೇ ಮಾಡಿ ಹದ್ದುಬಸ್ತು ಮಾಡಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸ್ಥಳೀಯರಾದ ಪರಮೇಶಪ್ಪ ಅವರು ಮಾತನಾಡಿ, ‘ಈ ಕೆರೆ ಬಹಳ ವರ್ಷಗಳಿಂದ ಇಲ್ಲಿದೆ. ಇಲ್ಲಿ ಕೆರೆ ಬಂದ್ ಮಾಡಿದರು. ನೀರಾವರಿ ಬಂದ್ ಆಯ್ತು. ನೀರಾವರಿ ಬಂದ್ ಆಗಿ 30 ವರ್ಷವಾಗಿದೆ. ಕೆಲವೆಡೆ ಒತ್ತುವರಿ ಮಾಡಿದ್ದಾರೆ. ಜಿಲ್ಲಾಡಳಿತ ಈ ಕೂಡಲೇ ಕೆರೆಯ ಸರ್ವೇ ಮಾಡಿ ತಡೆಗೋಡೆ ನಿರ್ಮಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಈ ಕುರಿತಂತೆ ನಿರ್ಲಕ್ಷ್ಯ ವಹಿಸಿದರೆ ತಡೆಗೋಡೆ ನಿರ್ಮಾಣವಾಗುವವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ಕೈಗೊಳ್ಳುವುದಾಗಿ ರೈತರು ಎಚ್ಚರಿಕೆ ರವಾನಿಸಿದ್ದಾರೆ.
Laxmi News 24×7