ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿ-ಆರ್‌ಐ) ಉತ್ತರ ಕರ್ನಾಟಕ ಭಾಗದ ಬಡವರ ‘ಸಂಜೀವಿನಿ’ ಎಂದೇ ಖ್ಯಾತಿ ಪಡೆದಿದೆ. ಈ ಭಾಗದ 8-10 ಜಿಲ್ಲೆಗಳ ಬಡ ರೋಗಿಗಳ ಪಾಲಿಗೆ ವರದಾನವಾಗಿರುವ ಸಂಸ್ಥೆ ಬೆಳೆದು ಬಂದ ಬಗೆ ರೋಚಕ. ಹಂತಹಂತವಾಗಿ ಬೆಳೆದು ಹೆಸರು ಬದಲಿಸಿಕೊಳ್ಳುವುದರ ಜೊತೆಗೆ ಮಹತ್ತರ ಮೈಲುಗಲ್ಲು ಸ್ಥಾಪಿಸಿದೆ.
1957ರ ಸೆ.6ರಂದು ವೈದ್ಯಕೀಯ ಮಹಾವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ (ಕೆಎಂಸಿ), 1960–70ರ ವೇಳೆಗೆ ದೇಶದಲ್ಲೇ ಉತ್ತಮ ವೈದ್ಯಕೀಯ ಮಹಾವಿದ್ಯಾಲಯವಾಗಿ ರೂಪುಗೊಂಡಿತು. ಕೆಎಂಸಿ 1996ರಲ್ಲಿ ಕಿಮ್ಸ್ (ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆಗಿ ಪರಿವರ್ತನೆಗೊಂಡಿತು. ಕಳೆದ ವರ್ಷ ಸೆ.6ರಂದು ಮತ್ತೆ ಕೆಎಂಸಿ-ಆರ್‌ಐ (ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ) ಆಗಿ ಮರುನಾಮಕರಣಗೊಂಡಿತು. 3ನೇ ಬಾರಿ ಹೆಸರು ಬದಲಾಯಿಸಿಕೊಂಡು ಗುಣಮಟ್ಟದ ಸೇವೆಗಳನ್ನು ನೀಡುತ್ತಾ ಬಂದಿದೆ.ಕೆಎಂಸಿ-ಆರ್‌ಐ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ ಹಸಬಿ ಅವರು ಕೆಎಂಸಿ ಬೆಳೆದ ಬಂದ ಬಗೆಯನ್ನು ವಿವರಿಸಿದ್ದಾರೆ. 1957ರಲ್ಲಿ ಆರಂಭವಾದ ಕೆಎಂಸಿಗೆ ಸ್ವಂತ ಕಟ್ಟಡವಿರಲಿಲ್ಲ. ವಿದ್ಯಾನಗರದ ಈಗಿರುವ ಸ್ಟೇಲಾರ ಮಾಲ್ನ ಹಳೇ ಕಟ್ಟಡದಲ್ಲಿ ಆರಂಭವಾಗಿ ಅಲ್ಲಿಯೇ ತರಗತಿಗಳು ನಡೆಯುತ್ತಿದ್ದವು. ಈ ಸಂಸ್ಥೆಯ ಸ್ಥಾಪಕರು ಬಿ.ಡಿ.ಜತ್ತಿಯವರು. ಪಾಟೀಲ್ ಪುಟ್ಟಪ್ಪ, ಎಸ್.ನಿಜಲಿಂಗಪ್ಪ, ಡಿ.ಪಿ.ಕರ್ಮಾಕರ್, ಡಾ.ಡಿ.ಸಿ.ಪಾವಟೆ, ಆರ್.ಎಂ.ಪಾಟೀಲ ಅವರು ಈ ಸಂಸ್ಥೆಯ ರೂವಾರಿಗಳಾಗಿದ್ದಾರೆ. ರಾಜ್ಯದಲ್ಲಿ ಪ್ರಥಮವಾಗಿ ಮೈಸೂರು ಮೆಡಿಕಲ್ ಕಾಲೇಜು,
ಬೆಂಗಳೂರು ಮೆಡಿಕಲ್ ಕಾಲೇಜು ನಂತರ ಕರ್ನಾಟಕ ಮೆಡಿಕಲ್ ಕಾಲೇಜು ಸ್ಥಾಪನೆಯಾಯಿತು. ಎಲ್ಲಾ ಕಾಲೇಜುಗಳು ಆಯಾ ಊರಿನ ಹೆಸರುಗಳನ್ನು ಇಟ್ಟುಕೊಂಡರೆ, ಇದೊಂದೇ ಕಾಲೇಜು ಮಾತ್ರ ‘ಕರ್ನಾಟಕದ ಮೆಡಿಕಲ್ ಕಾಲೇಜು’ ಅಂತ ನಾಮಕರಣ ಮಾಡಲಾಯಿತು. ಇಡೀ ರಾಜ್ಯದ ಹೆಸರಿರಲಿ ಎಂಬ ಉದ್ದೇಶದಿಂದ ಈ ನಾಮಾಂಕಿತವನ್ನು ಇಡಲಾಯಿತು. ಕರ್ನಾಟಕ ಮೆಡಿಕಲ್ ಕಾಲೇಜು ಆದ ಮೂರು ವರ್ಷಗಳ ನಂತರ ಪೂರ್ಣ ಪ್ರಮಾಣ ಕಾಲೇಜು ಆಗಿ ಕಾರ್ಯ ನಿರ್ವಹಿಸಲಾರಂಭಿಸಿತು. 1957ರಲ್ಲಿ ಆರಂಭವಾದಾಗ ಕರ್ನಾಟಕ ವೈದ್ಯಕೀಯ ಕಾಲೇಜ್ (ಕೆಎಂಸಿ) ಎಂದು ಹೆಸರಿಡಲಾಗಿತ್ತು. 44 ವರ್ಷಗಳ ಬಳಿಕ, ಅಂದರೆ 1996ರಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಎಂದು ಮರುನಾಮಕರಣ ಮಾಡಲಾಗಿತ್ತು. 28 ವರ್ಷಗಳ ನಂತರ, ಇದೀಗ ಮತ್ತೊಮ್ಮೆ ಹೆಸರು ಬದಲಾಯಿಸಿಕೊಂಡು 2024ರಲ್ಲಿ ಹಳೆ ಹೆಸರಿನ ಜೊತೆಗೆ ‘ಸಂಶೋಧನಾ ಸಂಸ್ಥೆ’ ಎನ್ನುವ ಹೊಸ ಪದ ಸೇರ್ಪಡೆಯಾಗಿ ಈ ಭಾಗದ ರೋಗಿಗಳಿಗೆ ನಿರಂತರ ಸೇವೆ ಸಲ್ಲಿಸಿಕೊಂಡು ಬರುತ್ತಿದೆ ಎಂದು ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.