ಹಾಸನ: ಸೆಪ್ಟಂಬರ್ 15ರಂದು ಅಂದರೆ ನಾಳೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಾಸನದಲ್ಲಿ ಇಂದು ಬೈಕ್ ರ‍್ಯಾಲಿಗೆ ಹಾಸನದ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಸ್ವತಃ ಬೈಕ್ ಚಾಲನೆ ಮಾಡುವ ಮೂಲಕ ಇಂದು ಹಸಿರು ನಿಶಾನೆ ತೋರಿದರು.
ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆಯಲ್ಲಿ “ನನ್ನ ಮತ ನನ್ನ ಹಕ್ಕು” ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ‍್ಯಾಲಿ ನಡೆಸಲಾಯಿತು. ರ‍್ಯಾಲಿ ಉದ್ಘಾಟಿಸಿ ಮಾತನಾಡಿದ ಅವರು, “ತಾಲ್ಲೂಕಿನಲ್ಲಿ ನಡೆದ ಭೀಕರ ಅಪಘಾತದಿಂದ ಮನಸ್ಸಿಗೆ ಬಹಳ ನೋವಾಗಿದೆ. ದುಃಖದ ಕರಿನೆರಳಿನಲ್ಲಿಯೇ ಈ ಬಾರಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನೆರವೇರಿಸಬೇಕಿದೆ” ಎಂದು ಹೇಳಿದರು.
“ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವುದು ಕರ್ತವ್ಯ. ನಾಳೆ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ‍್ಯಾಲಿ ಏರ್ಪಡಿಸಲಾಯಿತು. ಆದರೆ ಈ ಬಾರಿಯ ಆಚರಣೆಯು ನೋವಿನಿಂದ ಕೂಡಿದೆ. ಮನಸ್ಸಿನಲ್ಲಿ ಅಗಾದ ನೋವಿನ ನಡುವೆಯೂ ಈ ದಿನವನ್ನು ಆಚರಿಸುವುದು ಅವಶ್ಯಕ” ಎಂದು ತಿಳಿಸಿದರು.
ಇನ್ನು ಬೈಕ್ ರ‍್ಯಾಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭಗೊಂಡು, ಎನ್.ಆರ್.ಸರ್ಕಲ್, ಹೇಮಾವತಿ ಪ್ರತಿಮೆ, ರೇಸ್ ಕೋರ್ಸ್ ಸರ್ಕಲ್, ಗಂಧದಕೋಠಿ ಸರ್ಕಲ್, ಕಲಾ ಕಾಲೇಜ್ ಮೂಲಕ ಎಂ.ಜಿ ರಸ್ತೆಯಲ್ಲಿ ಸಾಗಿ ಡೈರಿ ವೃತ್ತದ ತನಕ ಸಾಗಿತು. ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಅವರು ಬೈಕ್ ರೈಡ್ ಮಾಡಿ, ಬೆಂಗಳೂರಿಗೆ ಸಾಗುವ ಬೈಕ್ ಸವಾರರನ್ನು ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಿಲ್ಲಾಧಿಕಾರಿ ಲತಾ ಕುಮಾರಿ ಸ್ವತಃ ಬುಲೆಟ್ ಬೈಕ್ ಹತ್ತಿ ಚಾಲನೆ ನೀಡಿ ಎಲ್ಲರ ಗಮನ ಸೆಳೆದರು. ಅಧಿಕಾರಿಗಳ ಈ ಉತ್ಸಾಹದೊಂದಿಗೆ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್ ಫಿರ್ ಹಾಗೂ ಮತ್ತಿತರರು ಹಾಜರಿದ್ದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಪ್ರತಿ ವರ್ಷ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತದೆ. 2007ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ, ಪ್ರಜಾಪ್ರಭುತ್ವ ತತ್ವಗಳನ್ನು ಉತ್ತೇಜಿಸಲು ಹಾಗೂ ಎತ್ತಿಹಿಡಿಯಲು ಮತ್ತು ಜಾಗತಿಕವಾಗಿ ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಈ ದಿನವನ್ನು ಘೋಷಿಸಿತು. ಮೊದಲ ಬಾರಿಗೆ 2008ರಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಯಿತು. ಮಾನವ ಹಕ್ಕುಗಳ ರಕ್ಷಣೆ, ಕಾನೂನಿನ ನಿಯಮ ಮತ್ತು ಸ್ವಾತಂತ್ರ್ಯ ಮತ್ತು ಸಮಾನತೆಯ ಪ್ರಚಾರ ಒಳಗೊಂಡಿರುವ ಪ್ರಜಾಪ್ರಭುತ್ವದ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ.