ಹಾವೇರಿ: ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿ ವರ್ಷ ಕಳೆಯುತ್ತಿದ್ದರೂ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಕಾಲೇಜು ಇನ್ನೂ ಉದ್ಘಾಟನೆಯಾಗಿಲ್ಲ. ಕಾಲೇಜಿಗೆ ತೆರಳಲು ರಸ್ತೆಯೂ ಇಲ್ಲದೆ ವಿದ್ಯಾರ್ಥಿಗಳು ಕೊನೇಪಕ್ಷ ಬಸ್ ಆದರೂ ಬಿಡಿ ಎಂದು ಆಗ್ರಹಿಸಿದ್ದಾರೆ.
2017ರಲ್ಲಿ ಸಿಎಂ ಸಿದ್ದರಾಮಯ್ಯ ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲಿ ಸುಮಾರು 10 ಜಿಲ್ಲೆಗಳಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಿಸಿದ್ದರು. ನಂತರ ಈ ಕಾಲೇಜುಗಳನ್ನು ಅವುಗಳದೇ ಆದ ಕಟ್ಟಡಗಳಿಗೆ ಸ್ಥಳಾಂತರಿಸಲಾಯಿತು. ಈ ರೀತಿ ಸ್ಥಳಾಂತರವಾದ ಕಾಲೇಜುಗಳಲ್ಲಿ ಒಂದು ಹಾವೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗಾಗಿ ಸ್ಥಾಪನೆಯಾಗಿರುವ ಈ ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿ ವರ್ಷವೇ ಕಳೆದಿದೆ. ಈ ಕಾಲೇಜು ಹಾವೇರಿಯಿಂದ 10 ಕಿಲೋ ಮೀಟರ್ ದೂರದ ಕಳ್ಳಿಹಾಳ ಗುಡ್ಡದ ಮೇಲೆ ನಿರ್ಮಾಣವಾಗಿದೆ.
ಇಲ್ಲಗಳ ನಡುವೆ ನಡೆಯುತ್ತಿರುವ ಕಾಲೇಜು: ಹಾವೇರಿಯಿಂದ ಸುಮಾರು 10 ಕಿ.ಮೀ ದೂರದ ಕಳ್ಳಿಹಾಳ ಗುಡ್ಡದಮೇಲೆ ಕಾಲೇಜು ಕಟ್ಟಡ ಕಟ್ಟಲಾಗಿದೆ. ವಿಚಿತ್ರ ಅಂದರೆ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ರಸ್ತೆಯೇ ಇಲ್ಲ. ವಿದ್ಯಾರ್ಥಿಗಳಿಗಾಗಿ ಕಾಲೇಜು ಸಮೀಪ ಸುಸಜ್ಜಿತ ವಸತಿ ನಿಲಯ ಕಟ್ಟಲಾಗಿದೆ. ಆದರೆ ಇನ್ನೂ ಕಟ್ಟಡ ಉದ್ಘಾಟನೆಯಾಗಿಲ್ಲ. ವಿದ್ಯಾರ್ಥಿಗಳು ಕಾಡುದಾರಿಯಂತಹ ಕಚ್ಚಾಹಾದಿಯಲ್ಲಿ ನಡೆದು ಬರುತ್ತಿದ್ದಾರೆ. ಹಾವೇರಿಯಿಂದ ಇಲ್ಲಿಗೆ ಬರಲು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಸಹ ಇಲ್ಲ. ಕೊನೆಯ ಪಕ್ಷ ರಸ್ತೆ ಇರುವಲ್ಲಿಯವರೆಗೆ ಆದರು ಬಸ್ ಬಿಡಿ ಎಂದರೆ ಬಸ್ ಕೂಡ ಬಿಡುತ್ತಿಲ್ಲಾ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.