ರಾಯಚೂರು : ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎನ್ನುವ ಮಾತಿದೆ. ಆದರೆ, ಅಪ್ಪ-ಅಮ್ಮ ಇಲ್ಲದ, ವಿಶೇಷ ವ್ಯಕ್ತಿ ತಾನು ವಿವಾಹ ಆಗಬೇಕು ಎನ್ನುವ ಹಂಬಲದೊಂದಿಗೆ ಕಳೆದ ಮೂರು ವರ್ಷಗಳಿಂದ ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದರೂ ವಧುವೇ ಸಿಕ್ಕಿರಲಿಲ್ಲ. ಆದರೆ, ಕೆಲಸಕ್ಕಾಗಿ ತೆರಳಿದಾಗ ಕಂಕಣ ಭಾಗ್ಯ ಕೂಡಿ ಬಂದಿದ್ದು, ಗ್ರಾಮಸ್ಥರೆಲ್ಲರೂ ಸೇರಿಕೊಂಡು ಅಪರೂಪದ ವಿವಾಹದ ಆರತಕ್ಷತೆ ನೆರವೇರಿಸಿದ್ದಾರೆ.
ಇದು ದಿವ್ಯಾಂಗರ ಶುಭ ವಿವಾಹ: ನವದಂಪತಿಯ ಹೆಸರು ರಂಗಪ್ಪ ಹಾಗೂ ನಾರಾಯಣಮ್ಮ. ಇವರಿಬ್ಬರು ಹುಟ್ಟಿನಿಂದ ಕಣ್ಣು ಕಾಣದವರು. ರಂಗಪ್ಪ ರಾಯಚೂರು ತಾಲೂಕಿನ ಯರಮರಸ್ ಗ್ರಾಮದ ನಿವಾಸಿಯಾಗಿದ್ದರೆ, ನಾರಾಯಣಮ್ಮ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ದೊಡ್ಡಕಲ್ಲಹಳ್ಳಿಯವರು. ಇವರಿಬ್ಬರು ಒಬ್ಬರಿಗೆ ಒಬ್ಬರು ಪರಿಚಯಸ್ಥರೂ ಅಲ್ಲ, ಸಂಬಂಧಿಕರು ಅಂತೂ ಅಲ್ಲವೇ ಅಲ್ಲ. ಆದರೂ ಈಗ ಈ ಅಂಧ ದಂಪತಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.ರಂಗಪ್ಪ ಹುಟ್ಟು ಕುರುಡನಾಗಿದ್ದು, ಮದುವೆಯಾಗಬೇಕು ಎಂದು ಎಲ್ಲಾ ಕಡೆಯೂ ವಧುವನ್ನು ಹುಡುಕುತ್ತಿದ್ದರು, ಜೊತೆಗೆ ತಮ್ಮ ಸಂಬಂಧಿಕರಿಗೂ ಸಹ ಯಾರಾದರೂ ವಿವಾಹ ಆಗುವವರು ಇದ್ದರೆ ತಿಳಿಸುವಂತೆ ಕೇಳಿಕೊಂಡಿದ್ದ. ತಮ್ಮ ಜೀವನ ಸಾಗಿಸುವುದಕ್ಕೆ ಎಂದು ಪರಿಚಯಸ್ಥರ ಹತ್ತಿರ ಕೆಲಸ ಕೇಳಿಕೊಂಡಿದ್ದ. ಆಗ ಆತನ ಸ್ನೇಹಿತ ಬೇರೆಯೊಬ್ಬರ ಪರಿಚಯ ಮಾಡಿಸಿದ್ದಾರೆ. ಈ ವೇಳೆ, ಅವರು ರಂಗಪ್ಪನ ಸ್ವವಿವರದ ಮಾಹಿತಿ ಪಡೆದುಕೊಂಡಿದ್ದಾರೆ. ಆಗ ರಂಗಪ್ಪ ಮದುವೆಯಾಗುವ ಹಂಬಲ ವ್ಯಕ್ತಪಡಿಸಿದ್ದಾರೆ.