ಬೆಳಗಾವಿ- ಬಿಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಅವಿರೋಧ ಆಯ್ಕೆಯ ಸಂಬಂಧ ಅಲ್ಲಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಜರುಗಿದ ಖಾನಾಪೂರ ತಾಲ್ಲೂಕು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಅಲ್ಲಿನ ಶಾಸಕ ವಿಠ್ಠಲ ಹಲಗೇಕರ ಮತ್ತು
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠಯವರೊಂದಿಗೆ ಸುದೀರ್ಘ ಚರ್ಚೆಯನ್ನು ನಡೆಸಿದರು.
ಅಕ್ಟೋಬರ್ 19 ರಂದು ನಡೆಯುವ ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ ಕನಿಷ್ಠ 12 ಸ್ಥಾನಗಳನ್ನು ಗೆಲ್ಲಿಸಿಕೊಡುವ ದೃಷ್ಟಿಯಿಂದ ಈಗಾಗಲೇ ಜಿಲ್ಲೆಯ ಎಲ್ಲ ತಾಲ್ಲೂಕು ಕ್ಷೇತ್ರಗಳಿಗೆ ತೆರಳಿ ಪ್ರಚಾರ ಸಭೆಯನ್ನು ನಡೆಸಿರುವ ಬಾಲಚಂದ್ರ ಜಾರಕಿಹೊಳಿಯವರು ಕಗ್ಗಂಟಿರುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಒಮ್ಮತ ಮೂಡಿಸುವ ಪ್ರಯತ್ನ ಮಾಡುತ್ತಿದ್ದು, ಸಾಧ್ಯವಾದಷ್ಟು ಅವಿರೋಧ ಆಯ್ಕೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ.
ಖಾನಾಪೂರ ತಾಲ್ಲೂಕು ಕ್ಷೇತ್ರದಲ್ಲಿ ಈ ಬಾರಿ ಅವಿರೋಧ ಆಯ್ಕೆಗೆ ಒಲುವು ತೋರಿ ಈಗಾಗಲೇ
ಅಭ್ಯರ್ಥಿಯಾಗಿರುವ ಹಾಲಿ ನಿರ್ದೇಶಕ ಮತ್ತು ಮಾಜಿ ಶಾಸಕ ಅರವಿಂದ ಪಾಟೀಲ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಂಬಂಧ ಹಲಗೇಕರ ಮತ್ತು ಹಟ್ಟಿಹೊಳಿ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದು, ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಬಯಸಿದ್ದ ಹಟ್ಟಿಹೊಳಿ ಅವರನ್ನು ಹಿಂದೆ ಸರಿಸುವಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಯಶಸ್ವಿಯಾಗಿದ್ದಾರೆ.
ಪಕ್ಷಾತೀತವಾಗಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ತಮ್ಮ ನೇತೃತ್ವದ ಅಭ್ಯರ್ಥಿಗಳನ್ನು ಗೆಲ್ಲಿಸಿ ತರಲು ಬಾಲಚಂದ್ರ ಜಾರಕಿಹೊಳಿಯವರು ಇತರೆ ಪಕ್ಷಗಳ ಮುಖಂಡರನ್ನು ಸಂಪರ್ಕ ಮಾಡುತ್ತಿದ್ದು, ಬಾಲಚಂದ್ರ ಜಾರಕಿಹೊಳಿಯವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಆ ಮುಖಂಡರು ಮಾಡುತ್ತಿದ್ದು, ಅರವಿಂದ ಪಾಟೀಲ ಅವರ ಅವಿರೋಧ ಆಯ್ಕೆಗೆ ಅನುಕೂಲ ಮಾಡಿಕೊಡುವಂತೆ ಹಲಗೇಕರ ಹಾಗೂ ಹಟ್ಟಿಹೊಳಿ ಅವರನ್ನು ಮನವೊಲಿಸುವಲ್ಲಿ ಬಾಲಚಂದ್ರ ಜಾರಕಿಹೊಳಿಯವರು ಯಶಸ್ವಿಯಾಗಿದ್ದಾರೆ.
ಸಂಧಾನದ ಪ್ರಕ್ರಿಯೆಯಲ್ಲಿ ಖಾನಾಪೂರ ಬ್ಲಾಕ್ ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಮುಖಂಡರಾದ ಪ್ರಮೋದ ಕೋಚಾರಿ, ಸಂಜಯ ಕೊಬಲ, ಧನಶ್ರೀ ಸರದೇಸಾಯಿ ಸೇರಿದಂತೆ ತಾಲ್ಲೂಕಿನ ವಿವಿಧ ಪಿಕೆಪಿಎಸ್ ಅಧ್ಯಕ್ಷರು ಉಪಸ್ಥಿತರಿದ್ದರು.