ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ನಿರಾಕರಿಸಿದೆ. ಹೆಚ್ಚುವರಿ ಹಾಸಿಗೆ – ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೈಲಿನ ಕೈಪಿಡಿಯಲ್ಲಿರುವ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ವರ್ಗಾಯಿಸಬೇಕೆಂದು ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದರ್ಶನ್ ಪರ ವಕೀಲ ಸುನೀಲ್ ಪ್ರಬಲವಾಗಿ ವಾದ ಮಂಡಿಸಿದ್ದರು. ಇದೇ ವೇಳೆ, ಹೆಚ್ಚುವರಿ ಹಾಸಿಗೆ – ದಿಂಬು ಕಲ್ಪಿಸುವಂತೆ ಪ್ರತ್ಯೇಕ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಇಂದಿಗೆ ಆದೇಶ ಕಾಯ್ದಿರಿಸಿತ್ತು.
ನಿಯಮ ಉಲ್ಲಂಘಿಸಿದರೆ ವರ್ಗ ಮಾಡಿ: ದರ್ಶನ್ ಬಳ್ಳಾರಿ ಜೈಲಿಗೆ ವರ್ಗಾವಣೆಗೆ ಸಕಾರಣವಿಲ್ಲ. ಜೈಲು ನಿಯಮ ಉಲ್ಲಂಘನೆ ಕಂಡು ಬಂದರೆ ಜೈಲಿನ ಹಿರಿಯ ಅಧಿಕಾರಿಗಳು ವರ್ಗಾವಣೆಗೆ ಕ್ರಮ ಕೈಗೊಳ್ಳಬಹುದು. ಜೈಲಿನ ಕೈಪಿಡಿ ಅನುಸರಿಸಬೇಕು ಎಂದು 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
ಹೆಚ್ಚುವರಿ ಹಾಸಿಗೆ – ದಿಂಬು ನೀಡುವಂತೆ ಅರ್ಜಿ ವಿಚಾರಣೆ ಸಂಬಂಧ ಇಂದೇ ನ್ಯಾಯಾಲಯವು ಆದೇಶ ಪ್ರಕಟಿಸಿತು. ಜೈಲಿನ ನಿಯಮದ ಅನುಸಾರ ಹಾಸಿಗೆ – ದಿಂಬು ನೀಡಬೇಕು. ಜೈಲಿನ ಹೊರಗೆ ಓಡಾಡಲು ಅನುವು ಮಾಡಿಕೊಡಬೇಕು. ಆರೋಗ್ಯ ಸಮಸ್ಯೆಯಾದರೆ ಜೈಲಿನ ವೈದ್ಯರನ್ನ ಭೇಟಿ ಮಾಡಬಹುದು. ಸ್ವಂತ ಹಣದಿಂದ ಕಾರಾಗೃಹದಲ್ಲಿರುವ ಅಂಗಡಿಗಳಲ್ಲಿ ತಿಂಡಿ-ತಿನಿಸುಗಳನ್ನು ಖರೀದಿಸಲು ದರ್ಶನ್ಗೆ ಅನುಮತಿ ನೀಡಿ ಎಂದು ಆದೇಶಿಸಿತು.