ಮಂಗಳೂರು, ಸೆಪ್ಟೆಂಬರ್ 6: ಧರ್ಮಸ್ಥಳದಲ್ಲಿ (Dharmasthala case) ಸಿಕ್ಕಿದ್ದು ಎಂದು ದೇಶವನ್ನೇ ಗದ್ದಲಕ್ಕೆ ದೂಡಿದ್ದ ಬುರುಡೆ ಈಗ ಅನಾಥವಾಗಿದೆ. ಮಾಲೀಕ ಯಾರು ಎಂಬುದೇ ಗೊತ್ತಾಗದ ಸ್ಥಿತಿಯಲ್ಲಿದೆ. ಯಾಕೆಂದರೆ ಆರಂಭದಲ್ಲಿ ಬುರುಡೆ ಜೊತೆಗಿದ್ದವರೆಲ್ಲಾ ಈಗ ಆ ಬುರುಡೆಯನ್ನು ದೂರ ತಳ್ಳುತ್ತಿದ್ದಾರೆ. ಮುಸುಕುಧಾರಿ ಚಿನ್ನಯ್ಯ, ‘ತಲೆಬುರುಡೆಯನ್ನು ನಾನು ಧರ್ಮಸ್ಥಳದಿಂದ ತಂದಿಲ್ಲ. ಇದನ್ನು ನನಗೆ ಕೊಟ್ಟಿದ್ದು ಜಯಂತ್’ ಎಂದು ಎಸ್‌ಐಟಿ ಮುಂದೆ ತಪ್ಪೊಪ್ಪಿಕೊಂಡಿದ್ದ. ಹೀಗಾಗಿ ದೂರುದಾರ ಜಯಂತ್‌ರನ್ನು ವಿಚಾರಣೆಗೆ ಕರೆಸಿ ಎಸ್ಐಟಿ ಫುಲ್ ಗ್ರಿಲ್ ಮಾಡಿತ್ತು. ಆದರೀಗ ಜಯಂತ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ನನಗೆ ಬುರುಡೆ ಕೊಟ್ಟಿದ್ದೇ ಗಿರೀಶ್ ಮಟ್ಟಣ್ಣನವರ್ ಎಂದಿದ್ದಾರೆ. ಹೀಗಾಗಿ ಬುರುಡೆ ಸುತ್ತಿಬಳಸಿ ಕೊನೆಗೆ ಗಿರೀಶ್ ಮಟ್ಟಣ್ಣನವರ್ ಬುಡಕ್ಕೆ ಬಂದುನಿಂತಿದೆ.
ತಡರಾತ್ರಿವರೆಗೂ ಗಿರೀಶ್, ಜಯಂತ್ ಪ್ರತ್ಯೇಕ ವಿಚಾರಣೆ
ಬುರುಡೆ ಮೂಲ ಕೆದಕಲು ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್‌ರನ್ನು ಶುಕ್ರವಾರ ವಿಚಾರಣೆಗೆ ಕರೆಯಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಎಸ್ಐಟಿ ಠಾಣೆಯಲ್ಲಿ ತಡರಾತ್ರಿವರೆಗೂ ಪ್ರತ್ಯೇಕವಾಗಿ ಕೂರಿಸಿ ಪ್ರಶ್ನೆಗಳನ್ನು ಕೇಳಲಾಗಿದೆ. ನನಗೆ ಬುರುಡೆ ಕೊಟ್ಟಿದ್ದೇ ಗಿರೀಶ್ ಮಟ್ಟಣ್ಣ ಎಂದು ಜಯಂತ್ ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದರೆ ಗಿರೀಶ್ ಮಟ್ಟಣ್ಣನವರ್ ಬುರುಡೆ ಬಗ್ಗೆ ತಮಗೇನು ಗೊತ್ತಿಲ್ಲ ಅಂತಾ ಉತ್ತರಿಸಿದ್ದಾರೆ. ಹೀಗಾಗಿ ಬುರುಡೆ ಮೂಲ ಕುತೂಹಲ ಮೂಡಿಸಿದೆ.
ಯೂಟ್ಯೂಬರ್ ಅಭಿಷೇಕ್‌ಗೂ ಬುರುಡೆ ಬಗ್ಗೆ ಪ್ರಶ್ನೆ
ಸುಜಾತ ಭಟ್ ಇಂಟರ್‌ವ್ಯೂವ್ ಮಾಡಿ ಸದ್ದು ಮಾಡಿದ್ದ ಯೂಟ್ಯೂಬರ್ ಅಭಿಷೇಕ್‌ನನ್ನು ಎಸ್ಐಟಿ ಟೀಂ ವಿಚಾರಣೆ ನಡೆಸಿದೆ. ಗಿರೀಶ್ ಮಟ್ಟಣ್ಣನವರ್, ಜಯಂತ್ ರೀತಿ ಪ್ರತ್ಯೇಕವಾಗಿ ಅಭಿಷೇಕ್‌ನನ್ನು ವಿಚಾರಣೆ ಮಾಡಲಾಗಿದ್ದು, ಬುರುಡೆ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ.