ಮೂಡಲಗಿ: ಘಟಪ್ರಭಾ ನದಿಯ ಪ್ರವಾಹದಿಂದ ರೈತರು ಬೆಳೆದ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಗಳು ನೀರು ಪಾಲಾಗಿದ್ದು, ವಿದ್ಯುತ್ ಪರಿಕರಗಳು, ರಸ್ತೆಗಳು ಹಾಳಾಗಿದ್ದು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಮುಂಚೆ ಹಾನಿಯಾಗಿದೆ. ರಾಜ್ಯ ಸರ್ಕಾರ ಈ ಕೂಡಲೇ ಎಸ್.ಡಿ.ಆರ್.ಎಫ್ ನಿದಿಯ ಜೊತೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಸಂತ್ರಸ್ತರ ರೈತರ ನೆರವಿಗೆ ಧಾವಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.
ಶುಕ್ರವಾರ ಸೆ-05 ರಂದು ತಾಲೂಕಿನ ಘಟಪ್ರಭಾ ನದಿ ತೀರದ ಪ್ರವಾಹ ಪೀಡಿತ ಅವರಾಧಿ, ಅರಳಿಮಟ್ಟಿ, ಢವಳೇಶ್ವರ ಹಾಗೂ ಮಸಗುಪ್ಪಿ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದ ಉಂಟಾದ ಹಾನಿಗಳನ್ನು ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಅವರು ಮಾತನಾಡಿರು.
ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚು ಮಳೆ ಆಗಿದೆ. ಕಳೆದ ಜೂನ್ 1ರಿಂದ ಸಪ್ಟಂಬರ್ 04 ರವರೆಗೆ ವಾಡಿಕೆ ಮಳೆಯ ಪ್ರಮಾಣ 487 ಮಿ. ಮೀ. ಆಗಬೇಕಿತ್ತು. ಆದರೆ, ಪ್ರಸ್ತುತ 609 ಮಿ.ಮೀ ಮಳೆಯಾಗಿದೆ.
ಹೆಚ್ಚುವರಿಯಾಗಿ 122 ಮಿ.ಮೀ. ಮಳೆಯಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 7.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಧಾರಾಕಾರ ಮಳೆ ಹಾಗೂ ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ ಪ್ರಾಥಮಿಕ ವರದಿ ಪ್ರಕಾರ ಸುಮಾರು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆ ಹಾನಿಗೀಡಾಗಿದೆ. ನದಿತೀರದಲ್ಲಿದ್ದ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಕಬ್ಬು, 31970 ಹೆಕ್ಟೇರ್ ಹೆಸರು, 12 ಸಾವಿರ ಹೆಕ್ಟೇರ್ ಗೋವಿನ ಜೋಳ, 3500 ಹೆಕ್ಟೇರ್ ಪ್ರದೇಶದಲ್ಲಿನ ಸೋಯಾಬಿನ್ ಬೆಳೆ ಹಾನಿಗೀಡಾಗಿದೆ. 11 ಸಾವಿರ ಹೆಕ್ಟೇರ್ ಭತ್ತ ಸೇರಿದಂತೆ ಇತರೆ ಬೆಳೆ ನೀರುಪಾಲಾಗಿವೆ ಹಾಗೂ 1,545 ಹೆಕ್ಟೇರ್‌ಗಿಂತ ಹೆಚ್ಚು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ ಎಂದರು.
ಮೂಡಲಗಿ ತಾಲೂಕು ಮತ್ತು ಅರಭಾವಿ ಕ್ಷೇತ್ರದಲ್ಲಿ ಈ ಪ್ರವಾಹದಲ್ಲಿ ಸುಮಾರು 2520 ಹೆಕ್ಟೇರ್ ಕೃಷಿ ಬೆಳೆ ಮತ್ತು ತೋಟಗಾರಿಕೆ ಬೆಳೆ, ಜಲಾವೃತ್ತಗೊಂಡು ರೈತರು ಕಂಗಾಲಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಹಣ ನೀಡಲು ಸರ್ಕಾರದ ಬಳಿ ಹಣವಿಲ್ಲ ಆದರೆ ರಾಜ್ಯದ ಮಂತ್ರಿಗಳಿಗೆ ಸುತ್ತಾಡಲು ಹೆಲಿಕ್ಯಾಪ್ಟರ್‌ಗಳನ್ನು ಖರೀದಿಸಲು ಹಣವಿದೆ ಎಂದರಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹದಿಂದ ಹಾನಿಗೀಡಾದ ಬೆಳೆಗಳ ವೀಕ್ಷಣೆ ಮಾಡಿ, ರೈತರಿಗೆ ಭರವಸೆ ತುಂಬುವ ಕೆಲಸವೇ ಮಾಡುತ್ತಿಲ್ಲ. ಬೆಳಗಾವಿಯ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಕಾರ್ಯನಿರ್ತರಾಗಿದ್ದಾರೆ ಹಾಗೂ ರಾಜ್ಯದ ಮಂತ್ರಿಗಳು ಸಹ ಬಿಹಾರ ಚುನಾವಣೆಯಲ್ಲಿ ಕಾರ್ಯನಿರತರಾಗಿದ್ದಾರೆ. ಇನ್ನು ಇವರಿಂದ ಪರಿಹಾರ ನಿರೀಕ್ಷೆ ಮಾಡುವುದು ಸಾಧ್ಯವೇ?? ರೈತರ ಬದುಕಿಗೆ ಗ್ಯಾರಂಟಿ ನೀಡದ ಅಸಮರ್ಥ ಸರ್ಕಾರ..! ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ನೋಡಲ್ ಅಧಿಕಾರಿ ಅನೀಲ ಹೆಗಡೆ, ಗ್ರೇಡ್-1 ತಹಸೀಲ್ದಾರ್ ಶಿವಾನಂದ ಬಬಲಿ, ತಾಪಂ ಸಹಾಯಕ ನಿರ್ದೆಶಕ ಎಸ್. ಎಸ್ ರೊಡ್ಡನ್ನವರ, ಕೃಷಿ ಇಲಾಖೆಯ ಪರಪ್ಪ ಹುಲಗಬಾಳ, ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಅವರಾಧಿ ಗ್ರಾ.ಪಂ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಶ್ರೀಶೈಲ ಪೂಜೇರಿ, ಸಿ.ಎಲ್. ನಾಯಕ, ಶಿವಪ್ಪ ಪೂಜೇರಿ, ಲಕ್ಷ್ಮಣ ಉಟಗಿ, ಗಂಗಾಧರ ಹಿರೇಮಠ, ರಾಮನಗೌಡ ಪಾಟೀಲ, ಬಸವರಾಜ ಪಡಶೆಟ್ಟಿ, ರಂಗಪ್ಪ ಉಪ್ಪಾರ, ರಾಜು ಉಪ್ಪಾರ, ಗೋವಿಂದ ಚನ್ನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮಗಳ ರೈತರು ಉಪಸ್ಥಿತರಿದ್ದರು