ಶಿವಮೊಗ್ಗ : ರಾಜ್ಯದಲ್ಲಿಯೇ ಹೆಸರುವಾಸಿಯಾಗಿರುವ ಶಿವಮೊಗ್ಗದ ಹಿಂದೂ ಮಹಾಮಂಡಲದ ಗಣಪತಿಯ ರಾಜಬೀದಿ ಉತ್ಸವ ನಾಳೆ ನಡೆಯಲಿದೆ. ಗಣೇಶ ಚತುರ್ಥಿ ನಂತರ 11 ದಿನಕ್ಕೆ ಬರುವ ಅನಂತ ಚತುರ್ಥಿಯಂದು ಗಣೇಶನ ರಾಜಬೀದಿ ಉತ್ಸವ ನಡೆಯುವುದು ವಾಡಿಕೆ. ಇದರಿಂದಾಗಿ ನಾಳೆಯ ರಾಜಬೀದಿ ಉತ್ಸವಕ್ಕೆ ಹಿಂದೂ ಕೇಸರಿ ಅಲಂಕಾರ ಸಮಿತಿಯವರು ಶಿವಮೊಗ್ಗ ನಗರವನ್ನು ಸಂಪೂರ್ಣ ಕೇಸರಿಮಯ ಮಾಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯು 1 ಸಾವಿರ ಸಿಬ್ಬಂದಿಯನ್ನ ನಿಯೋಜಿಸಿದೆ.
ಸಮುದ್ರ ಮಂಥನದ ಅಲಂಕಾರ : ಹಿಂದೂ ಕೇಸರಿ ಅಲಂಕಾರ ಸಮಿತಿಯವರು ಪ್ರತಿ ವರ್ಷ ಭಾರತೀಯ ಸನಾತನ ಧರ್ಮದ ವಿವಿಧ ಅಲಂಕಾರಗಳನ್ನು ಮಾಡಿಕೊಂಡು ಬಂದಿದ್ದಾರೆ.
ಗಾಂಧಿ ಬಜಾರ್ನ ಮುಖ್ಯದ್ವಾರದಲ್ಲಿ ಈ ಬಾರಿ ಸಮುದ್ರ ಮಂಥನದ ವಿಶೇಷ ಅಲಂಕಾರ ಮಾಡಲಾಗಿದೆ. ಇದನ್ನು ಜನರು ಮುಗಿ ಬಿದ್ದು ನೋಡುತ್ತಿದ್ದಾರೆ. ಅಲ್ಲದೇ ಜನ ಪೋಟೊ, ಸೆಲ್ಪಿ ಹಾಗೂ ಶಿವಮೊಗ್ಗದ ಅನೇಕ ಜನರ ಸ್ಟೇಟಸ್ ಇದೇ ಆಗಿದೆ.ಈ ಕುರಿತು ಸಮಿತಿಯ ದೀನ್ ದಯಾಳ್ ಅವರು ಮಾಹಿತಿ ನೀಡಿದ್ದು, ‘144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ನಡೆಯುತ್ತದೆ. ಈ ಕುಂಭ ಮೇಳ ನಡೆಯಲು ಕಾರಣವಾದ ಘಟನೆಯಾದ ಸಮುದ್ರ ಮಂಥನದ ಕುರಿತ ಸನ್ನಿವೇಶವನ್ನು ಮಾಡಲಾಗಿದೆ. ಸಮುದ್ರದಲ್ಲಿ ಗುಡ್ಡಕ್ಕೆ ವಾಸುಕಿಯನ್ನು ಕಟ್ಟಿ ದೇವತೆಗಳು ಹಾಗೂ ರಾಕ್ಷಸರು ಎಳೆಯುತ್ತಾರೆ. ಈ ವೇಳೆ, ಅಮೃತ ಬರುತ್ತದೆ.
ಅಮೃತ ಬರುವ ಮುನ್ನ ವಿಷ ಬರುತ್ತದೆ. ಈ ವಿಷವನ್ನು ಈಶ್ವರ ಕುಡಿಯುತ್ತಾರೆ. ಈ ಸನ್ನಿವೇಶದ ಕಲಾಕೃತಿಯನ್ನು ಮಾಡಲಾಗಿದೆ. ಇದೇ ರೀತಿ ಶಿವಪ್ಪ ನಾಯಕ ವೃತ್ತದಲ್ಲಿ ದಶಾವತಾರದ ಪರಶುರಾಮ, ಬಿ ಹೆಚ್ ರಸ್ತೆ ಕಡೆ ಧರ್ಮಸ್ಥಳದ ಮಹಾದ್ವಾರವನ್ನು ನಿರ್ಮಾಣ ಮಾಡಲಾಗಿದೆ. ನೆಹರು ರಸ್ತೆಯಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಅಲಂಕಾರ ಮಾಡಲಾಗಿದೆ. ಹಾಗೆಯೇ ಎಂಆರ್ಎಸ್ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಶ್ರೀರಾಮನ ಅಲಂಕಾರ ಮಾಡಲಾಗಿದೆ. ಮೆರವಣಿಗೆ ಸಾಗುವ ಗಾಂಧಿ ಬಜಾರ್ನಲ್ಲಿ ಕೇಸರಿ ಬಂಟಿಂಗ್ಸ್ ಕಟ್ಟಲಾಗಿದೆ’ ಎಂದಿದ್ದಾರೆ.