Breaking News

ದೇವಾಲಯ ಸುತ್ತ 200 ಮೀಟರ್ ಮಾಂಸಾಹಾರ ಸೇವನೆ ನಿಷೇಧ: ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್

Spread the love

ಬೆಂಗಳೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದ ಹೊನ್ನೇಶ್ವರಸ್ವಾಮಿ ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿಸಿ ಪೊಲೀಸರು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು 2024ರ ಜುಲೈ 13ರಂದು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಹೊನ್ನೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಟ್ರಸ್ಟ್ (ರಿ) ಅಧ್ಯಕ್ಷ ಜೆ. ಮಂಜುನಾಥ ಹಾಗೂ ದೇವಸ್ಥಾನದ ಗುರುಗಳಾದ ಜಿ.ಎಸ್. ರಾಮಚಂದ್ರ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮಪ್ರಸಾದ್​ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿತು.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಹೊನ್ನೇಶ್ವರಸ್ವಾಮಿ ದೇವಾಲಯ ಮುಜರಾಯಿ ದೇವಸ್ಥಾನ ಅಲ್ಲ. ಇದೊಂದು ಖಾಸಗಿ ದೇವಾಲಯ. ಗ್ರಾಮಸ್ಥರು ಹಾಗೂ ಭಕ್ತಾದಿಗಳು ನಿರ್ವಹಣೆ ಮಾಡುತ್ತಿದ್ದಾರೆ. ದೇವಸ್ಥಾನದ ಬಳಿ ಯಾವುದೇ ಪ್ರಾಣಿಗಳ ಬಲಿ ಅಥವಾ ವಧೆ ಮಾಡುವುದಿಲ್ಲ. ಹೊರಗಿನಿಂದ ತಂದ ಮಾಂಸವನ್ನು ಅಡುಗೆ ಮಾಡಿ ದೇವಸ್ಥಾನದ ಬಳಿ ಇರುವ ಸಮುದಾಯ ಭವನ ಹಾಗೂ ಉಪಹಾರ ಗೃಹದಲ್ಲಿ ಸೇವನೆ ಮಾಡುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಆದರೆ, ಇದೀಗ ಪೊಲೀಸರು ನೋಟಿಸ್ ಕೊಟ್ಟು ಮಾಂಸಾಹಾರ ಸೇವನೆ ನಿಷೇಧಿಸಿದ್ದಾರೆ. ಇದು ಆಹಾರದ ಹಕ್ಕು ಹಾಗೂ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣಾ ಪದ್ದತಿಗೆ ವಿರುದ್ಧವಾಗಿದೆ ಎಂದು ವಾದಿಸಿದರು.

ವಾದ ಆಲಿಸಿದ ನ್ಯಾಯಪೀಠವು, ನೋಟಿಸ್ ಕೊಡುವ ಮೊದಲು ಸ್ಥಳೀಯ ಆಚಾರ ಸಂಪ್ರದಾಯಗಳನ್ನು ಪರಿಶೀಲಿಸಲಾಗಿದೆಯೇ? ದೇವಸ್ಥಾನದ ಬಳಿ ಮಾಂಸಾಹಾರ ಸೇವನೆ ಯಾವ ಕಾರಣಕ್ಕಾಗಿ ನಿಷೇಧಿಸಲಾಗಿದೆ ಎಂಬ ಬಗ್ಗೆೆ ಪೊಲೀಸರ ಮೂಲಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೇ, ಅರ್ಜಿ ಸಂಬಂಧ ರಾಜ್ಯ ಗೃಹ ಇಲಾಖೆ, ತುಮಕೂರು ಜಿಲ್ಲಾಧಿಕಾರಿ, ಮಧುಗಿರಿ ತಹಶೀಲ್ದಾರ್, ಬಡವನಹಳ್ಳಿ ಪೊಲೀಸ್ ವೃತ್ತ ನಿರೀಕ್ಷರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್​ 10ಕ್ಕೆ ಮುಂದೂಡಿತು.

ಪ್ರಕರಣ: ಶಿವನಗೆರೆ ಗ್ರಾಮದಲ್ಲಿರುವ ಹೊನ್ನೇಶ್ವರಸ್ವಾಮಿ ದೇವಸ್ಥಾನ 500 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಅಲ್ಲಿಂದ ಇಲ್ಲಿವಯರೆಗೆ ಯಾವುದೇ ಗೊಂದಲಗಳಿಲ್ಲದೆ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ.


Spread the love

About Laxminews 24x7

Check Also

ರಾಯಬಾಗ : ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಹೋಗಿ ಚನ್ನಾಗಿ ಓದಲಿ ಎಂಬುದು ತಂದೆ ತಾಯಿ ಕನಸು ಆಗಿರುತ್ತೆ

Spread the love ರಾಯಬಾಗ : ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಹೋಗಿ ಚನ್ನಾಗಿ ಓದಲಿ ಎಂಬುದು ತಂದೆ ತಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ