ಬೆಂಗಳೂರು: ಮುಸ್ಲಿಂ ಯುವತಿಯರನ್ನು ವಿವಾಹವಾದರೆ ಹಿಂದೂ ಯುವಕರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧದ ಎಫ್ಐಆರ್ಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ತನಿಖೆ ಮುಂದುವರೆಸಬಹುದು. ಆದರೆ, ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ತಿಳಿಸಿದೆ.
ತಮ್ಮ ಹೇಳಿಕೆಯ ವಿರುದ್ಧ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ. ಐ. ಅರುಣ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಅಲ್ಲದೆ, ಆಕ್ಷೇಪಣೆ ಸಲ್ಲಿಸಲು ಕೋರಿ ತನಿಖಾಧಿಕಾರಿಗಳು ಹಾಗೂ ದೂರುದಾರರಿಗೆ ತುರ್ತು ನೋಟಿಸ್ ಜಾರಿ ಮಾಡಿತು. ಜತೆಗೆ, ಅರ್ಜಿದಾರರ ವಿರುದ್ಧದ ಆರೋಪಕ್ಕೆ ಮೂರು ವರ್ಷ ಮಾತ್ರ ಶಿಕ್ಷೆ ವಿಧಿಸಬಹುದಾಗಿದೆ. ಹೀಗಾಗಿ, ಪ್ರಕರಣ ತನಿಖೆ ಮುಂದುವರೆಯಬಹುದು. ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವಂತಿಲ್ಲ. ತನಿಖೆಗೆ ಅರ್ಜಿದಾರರು ಸಹಕರಿಸಬೇಕು ಎಂದು ತಿಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನನ್ನ ಕಕ್ಷಿದಾರರ ಹೇಳಿಕೆಯನ್ನು ಆಧರಿಸಿ ಕಲಬುರಗಿ, ವಿಜಯಪುರ ಮತ್ತು ಕೊಪ್ಪಳದಲ್ಲಿ ಮೂರು ಎಫ್ಐಆರ್ಗಳು ದಾಖಲಾಗಿವೆ. ಮೂರೂ ಪ್ರಕರಣಗಳ ವಿಚಾರಣೆ ಕೊಪ್ಪಳ ಠಾಣೆಗೆ ವರ್ಗಾವಣೆಯಾಗಿದೆ. ಒಂದೇ ಆರೋಪ ಸಂಬಂಧ ಮೂರು ಪ್ರಕರಣ ದಾಖಲಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಪ್ರಕರಣ ರದ್ದು ಮಾಡಬೇಕು ಎಂದು ಕೋರಿದರು.
ಮುಸ್ಲಿಂ ಯುವತಿಯರನ್ನು ವಿವಾಹವಾದರೆ ಹಿಂದೂ ಯುವಕರಿಗೆ 5 ಲಕ್ಷ ರೂ.ಗಳನ್ನು ನೀಡುವ ಆರೋಪ ನನ್ನ ಕಕ್ಷಿದಾರರ ಮೇಲಿದೆ. ಅಂತರ್ಧಮೀಯ ವಿವಾಹಕ್ಕೆ ನಮ್ಮ ಸಂವಿಧಾನದಲ್ಲಿ ನಿಷೇಧವಿಲ್ಲ. ವಿಶೇಷ ವಿವಾಹ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿದೆ. ಜಾತ್ಯತೀತ ದೇಶವಾಗಿರುವ ಭಾರತದಲ್ಲಿ ಈ ಹೇಳಿಕೆ ಅಪರಾಧವಲ್ಲ. ಅಲ್ಲದೆ, ಅರ್ಜಿದಾರರ ವಿರುದ್ಧ ದಾಖಲಾಗಿರುವ ಸೆಕ್ಷನ್ಗಳ ಅಡಿ ಕೇವಲ ಮೂರು ವರ್ಷ ಶಿಕ್ಷೆ ಮಾತ್ರ ವಿಧಿಸಬಹುದಾಗಿದೆ ಎಂದು ಪೀಠಕ್ಕೆ ವಿವರಿಸಿದರು.
ವಿಶ್ವದಲ್ಲಿ ಈಜಿಪ್ಟ್, ರೋಮ್ ಮತ್ತು ಮೆಸಪಟೋಮಿಯಾ ಸೇರಿ ಹಲವು ನಾಗರಿಕತೆಗಳಿದ್ದವು. ಒಂದು ಹಂತದಲ್ಲಿ ಎಲ್ಲವೂ ಬದಲಾಗಿ ಹೊಸ ನಾಗರೀಕತೆ ಹುಟ್ಟಿಕೊಂಡಿದ್ದು ಹಳೆಯ ಸಂಪ್ರದಾಯಗಳನ್ನು ಮುಂದುವರೆಸುತ್ತಿಲ್ಲ. ಆದರೆ, ಭಾರತದಲ್ಲಿ ಸಿಂಧೂ ನಾಗರೀಕತೆಯಿಂದ ಇಂದಿಗೂ ಅದನ್ನೇ ಅನುಸರಿಸುತ್ತಿದ್ದೇವೆ. ದೇಶಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದ್ದು, ಅತ್ಯಂತ ವೈವಿಧ್ಯಮಯ ದೇಶವಾಗಿದೆ. ಇಲ್ಲಿ ಜಾತಿ ಧರ್ಮಗಳು ಸಾವಿರಾರು ವರ್ಷಗಳಿಂದಲೂ ಬೇರೂರಿವೆ. ಕಲಹ ಎನ್ನುವುದು ಮನುಷ್ಯನ ಸಹಜ ಗುಣ. ಕುಟುಂಬದಲ್ಲಿ ಅಣ್ಣ- ತಮ್ಮ ಹೊಡೆದಾಡುವುದು ಸಾಮಾನ್ಯ. ಇತಿಹಾಸದಲ್ಲಿ ಒಂದು ಧರ್ಮೀಯರು ಮತ್ತೊಂದು ಧರ್ಮೀಯರೊಂದಿಗೆ ಕಿತ್ತಾಡುವುದು, ಅದೇ ರೀತಿಯಲ್ಲಿ ಒಬ್ಬರಿಗೊಬ್ಬರು ಪ್ರೀತಿಸುವುದು, ನೆರವಾಗುವುದೂ ಸಾಮಾನ್ಯ ಎಂದು ನ್ಯಾಯಾಧೀಶರು ಹೇಳಿದರು.
ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವಾದರೂ, ಸಮಾಜದಲ್ಲಿ ಸಾಮರಸ್ಯದಿಂದ ಬದುಕುವುದಕ್ಕೆ ಅಗತ್ಯವಿಲ್ಲದ ಅಂಶಗಳನ್ನು ಬಿಡಬೇಕು. ಅದು ಆಗುತ್ತಿಲ್ಲ. ಒಳ್ಳೆಯ ಅಂಶಗಳು ಎಲ್ಲಿಂದ ಬಂದರೂ ಸ್ವೀಕರಿಸಬೇಕು. ಆದರೆ, ಅದಕ್ಕೆ ಅಡ್ಡಿಯಾಗುವುದನ್ನು ತೆಗೆದು ಹಾಕಬೇಕಾಗಿದೆ. ನಮ್ಮಲ್ಲಿ ಮನುಷ್ಯರನ್ನು ಮನುಷ್ಯರಂತೆ ನೋಡುವುದಕ್ಕೂ ಮುಂದಾಗುತ್ತಿಲ್ಲ. ಸಮಾಜದಲ್ಲಿ ತಾರತಮ್ಯದಿಂದ ನೋಡುವುದು ದೇಶಕ್ಕೆ ಅಡ್ಡಿಯಾಗಿ ನಿಂತಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.