ಚಾಮರಾಜನಗರ: ಕಾಡಾನೆಗೆ ಊಟ, ರೈತನಿಗೆ ಪ್ರಾಣ ಸಂಕಟ ಎಂಬಂತೆ ನಡುರಸ್ತೆಯಲ್ಲಿ ಪಲ್ಟಿಯಾದ ಈಚರ್ ವಾಹನ ಕಂಡು ಕಾಡಾನೆಯೊಂದು ಓಡೋಡಿ ಬಂದು ಟೊಮೊಟೊ ತಿಂದ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರು ಸಮೀಪ ತಡರಾತ್ರಿ ನಡೆದಿದೆ.
ಚಿಕ್ಕಮಗಳೂರಿನಿಂದ ಕೇರಳಕ್ಕೆ ಈಚರ್ ನಲ್ಲಿ ಟೊಮೊಟೊ ಸಾಗಿಸುವಾಗ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲಿ ಪಲ್ಟಿಯಾಗಿದೆ. ಸುಮಾರು 210 ಬಾಕ್ಸ್ ಟೊಮೊಟೊ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಕಂಡ ಕಾಡಾನೆ ಓಡೋಡಿ ಬಂದು ತಿಂದಿದೆ.
ರಸ್ತೆಯಲ್ಲಿ ಟೊಮೊಟೊ ತಿನ್ನುತ್ತಾ ನಿಂತ ಕಾಡಾನೆಯನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಓಡಿಸಿ, ಟ್ರ್ಯಾಕ್ಟರ್ ಮೂಲಕ ಈಚರ್ ಅನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮೊದಲೇ ಬೆಲೆ ಇಲ್ಲದೆ ಪರದಾಡುತ್ತಿದ್ದ ರೈತನಿಗೆ ಟೊಮೊಟೊ ರಸ್ತೆ ಪಾಲಾಗಿ ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.
ಡೆಡ್ಲಿ ಅಪಘಾತ- ಓರ್ವ ಬಲಿ: ಲಾರಿ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಯಳಂದೂರು ತಾಲೂಕಿನ ಎಳೆ ಪಿಳ್ಳಾರಿ ದೇವಾಲಯ ಬಳಿ ನಡೆಯಿತು.
ಉಡುಪಿ ಮೂಲದ ಚಾಲಕ ಅನಂತ್ ಮೃತ ದುರ್ದೈವಿ. ಟ್ರ್ಯಾಕ್ಟರ್ ನಲ್ಲಿದ್ದ ನಿಂಗರಾಜನಾಯಕ್ ಹಾಗೂ ಮಲ್ಲೇಶ್ ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.