Breaking News

ಮೃತದೇಹ ಸ್ವೀಕರಿಸಲೊಪ್ಪದ ಸಹೋದರ; ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಮಾಜಸೇವಕ

Spread the love

ಉಡುಪಿ : ಜಿಲ್ಲೆಯ ಕಾಪು ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟ ವ್ಯಕ್ತಿಯ ಸಹೋದರ ಅಂತ್ಯಕ್ರಿಯೆಗೆ ಮೃತದೇಹ ಸ್ವೀಕರಿಸಲು ಒಪ್ಪದ ಕಾರಣ ಸಮಾಜ ಸೇವಕ ವಿಶು ಶೆಟ್ಟಿ ಅವರೇ ಮುಂದೆ ನಿಂತು ಮೃತನ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ರುದ್ರ ಭೂಮಿಯಲ್ಲಿ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮೃತ ವ್ಯಕ್ತಿಯ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಮೃತನ ಸಹೋದರನನ್ನು ಕರೆಯಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಕೊನೆಗೆ ಅಂತ್ಯಸಂಸ್ಕಾರ ನಡೆಸಲು ಮೃತ ದೇಹವನ್ನು ಪಡೆಯಲು ಸಹೋದರ ನಿರಾಕರಿಸಿದರು. ಆತನ ಮನವೊಲಿಸುವ ಕೆಲಸವೂ ವಿಫಲವಾಯಿತು. ಕೊನೆಗೆ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ವಿಶು ಶೆಟ್ಟಿ ಅವರೇ ಶವವನ್ನು ಸ್ವೀಕರಿಸಿ, ಮೃತ ವ್ಯಕ್ತಿಯ ಧರ್ಮದ ಪ್ರಕಾರ ದಫನ ಕಾರ್ಯ ನಡೆಸಿದರು.

ಈ ಮಾನವೀಯ ಕಾರ್ಯದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಹುಸೇನ್, ರಾಮದಾಸ್ ಪಾಲನ್ ಉದ್ಯಾವರ ಹಾಗೂ ಉದ್ಯಾವರದ ಕನಸಿನ ಮನೆಯ ಶಿವ ನೆರವಾದರು. ಅಂಬಲಪಾಡಿ ಕೃಷ್ಣ ಜೆಸಿಬಿ ನೀಡಿ ಸಹಕರಿಸಿದರು.

ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಸಮಾಜಸೇವಕ ವಿಶು ಶೆಟ್ಟಿ, ‘ಈ ಪ್ರಕರಣವನ್ನು ಗಮನಿಸಿದಾಗ ಸಹೋದರತೆ, ಬಾಂಧವ್ಯ ಎಲ್ಲ ಮರೀಚಿಕೆಯೇ ಎಂಬ ಪ್ರಶ್ನೆ ಕಾಡುತ್ತದೆ. ಸ್ವಂತ ಸಹೋದರನೇ ಮೃತದೇಹ ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ನಾವು ಮೃತದೇಹ ಸ್ವೀಕರಿಸಿ, ಗೌರವದೊಂದಿಗೆ ದಫನ ಮಾಡಿದ್ದೇವೆ. ಈ ಮಾನವೀಯ ಕಾರ್ಯಕ್ಕೆ ಸಹೃದಯ ವ್ಯಕ್ತಿಗಳು ಕೂಡ ಸಹಕಾರ ನೀಡಿದ್ದಾರೆ’ ಎಂದು ವಿಶು ಶೆಟ್ಟಿ ತಿಳಿಸಿದರು.

ಉಡುಪಿಯಲ್ಲಿದ್ದಾರೆ ಮತ್ತೋರ್ವ ನಿರ್ಗತಿಕ ಮೃತದೇಹಗಳ ವಾರಸುದಾರ: ಸಮಾಜಕ್ಕಾಗಿ ಬದುಕುವುದರಲ್ಲಿರುವ ಸಂತೋಷ ಮತ್ಯಾವುದರಲ್ಲೂ ಇಲ್ಲ ಎಂಬ ಮಾತನ್ನು ಸಾಕ್ಷಿಕರಿಸುವ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮುಖ್ಯಸ್ಥ ನಿತ್ಯಾನಂದ ಒಳಕಾಡು ಅವರು ಅವರ ಹೆಸರಿನಂತೆಯೇ ನಿತ್ಯ ಆನಂದಕ್ಕಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರು ಕಳೆದ 25 ವರ್ಷಗಳಿಂದ ನಿತ್ಯ ಒಂದಲ್ಲೊಂದು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಾ ಬರುತ್ತಿರುವ ಸೇವೆ ಗಮನಾರ್ಹ. ನಿತ್ಯಾನಂದ ಅವರು ಸಮಾಜದ ದುರ್ಬಲ ವರ್ಗ, ಅನಾಥರು, ನಿರ್ಗತಿಕರು ಮತ್ತು ಶೋಷಿತರನ್ನೇ ತಮ್ಮ ಬಂಧುಗಳ ರೀತಿ ಉಪಚರಿಸಿ ಖುಷಿ ಕಾಣುತ್ತಾರೆ. ಅನಾಥಶವಗಳಿಗೆ ಹೆಗಲು ಕೊಡುವ ನಿತ್ಯಾನಂದ ಅವರು ಈವರೆಗೆ ಬರೋಬ್ಬರಿ 505 ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.


Spread the love

About Laxminews 24x7

Check Also

ಆರ್​​ಎಸ್​​ಎಸ್ ಎದುರು ಹಾಕಿಕೊಂಡಿದ್ದೀರಿ, ನೀವು ಸುಟ್ಟು ಭಸ್ಮ ಆಗ್ತೀರಿ : ಶೆಟ್ಟರ್

Spread the loveಹುಬ್ಬಳ್ಳಿ : ಆರ್​​ಎಸ್​​ಎಸ್ ಸಂಘಟನೆಯನ್ನು ಎದುರು ಹಾಕಿಕೊಂಡಿದ್ದೀರಿ, ನೀವು ಸುಟ್ಟು ಭಸ್ಮ ಆಗ್ತೀರಿ. ಇದು ನಿಮ್ಮ ಅಂತ್ಯದ ಆರಂಭ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ