ಅಂಕೋಲಾ(ಉತ್ತರ ಕನ್ನಡ): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ಕಪ್ ಗೆದ್ದ ಸಂಭ್ರಮದಲ್ಲಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಅವರ್ಸಾದಲ್ಲಿ ವಿಶೇಷವಾಗಿ ನಿರ್ಮಾಣಗೊಂಡ ಆರ್‌ಸಿಬಿ ಗಣಪ ಜನಮನ ಸೂರೆಗೊಳ್ಳುತ್ತಿದೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಪಕ್ಕ ಬಸ್ ಏರಿ ಕಪ್ ಹಿಡಿದು ಗಣೇಶ ನಿಂತಿದ್ದು, ಈ ಹಿಂದೆ ರಾಜ್ಯದಾದ್ಯಂತ ನಡೆದ ಸಂಭ್ರಮಾಚರಣೆಯನ್ನು ಮತ್ತೆ ಮರುಕಳಿಸುವಂತೆ ಮಾಡಲಾಗಿದೆ. ಅಂಕೋಲಾ ಅವರ್ಸಾದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 42ನೇ ವರ್ಷದ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.
RCB ಐಪಿಎಲ್ ಗೆದ್ದ ಸಂಭ್ರಮವನ್ನು ಕಣ್ಣಿಗೆ ಕಟ್ಟುವಂತೆ ರೂಪಿಸಿದ್ದರಿಂದ ಅವರ್ಸಾದ ಈ ಗಣಪತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಖ್ಯಾತ ಕಲಾವಿದ ದಿನೇಶ್ ಮೇತ್ರಿ ಕೈಚಳಕದಲ್ಲಿ ಈ ವಿಭಿನ್ನ ಶೈಲಿಯ ಗಜಾನನ ಮೂಡಿದ್ದು, ವರದಾ ಲೈನ್ಸ್ ಟ್ರಾನ್ಸ್ ಪೋರ್ಟ್ ಮಾಲಕ ತುಳಸಿದಾಸ ಕಾಮತ್ ಈ ವಿಶೇಷ ಗಣಪತಿ ಪ್ರತಿಷ್ಠಾಪನೆಗೆ ಪ್ರಾಯೋಜಕತ್ವ ಒದಗಿಸಿದ್ದಾರೆ.
ವರದಾ ಲೈನ್ಸ್ ಯಶಸ್ವಿ ಒಂದು ವರ್ಷ ಪೂರೈಸಿದ ಹಿನ್ನೆಲೆ ಹಾಗೂ ಆರ್‌ಸಿಬಿ ತಂಡದ ಅಭಿಮಾನದ ಮೇರೆಗೆ ಸಮಿತಿಗೆ ಈ ಮೂರ್ತಿ ಕೊಡುಗೆಯಾಗಿ ನೀಡಿದ್ದು, ಅವರ್ಸಾ ಗಣಪನ ವೀಕ್ಷಣೆಗೆ ಭಕ್ತಸಾಗರವೇ ಹರಿದು ಬರುತ್ತಿದೆ. ಪ್ರತಿವರ್ಷ ರಾಜ್ಯದಲ್ಲಿಯೇ ಗಮನ ಸೆಳೆಯುವಂತ ಮೂರ್ತಿ ಪ್ರತಿಷ್ಠಾಪಿಸುವ ಅವರ್ಸಾದ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಆಡಂಬರ ರಹಿತ ಆಚರಣೆ ಹಾಗೂ ಮಾದರಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದೆ.ಕಳೆದ 17 ವರ್ಷಗಳಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸುತ್ತಿರುವ ಈ ಸಮಿತಿ ಮೆರವಣಿಗೆ ವೇಳೆ ಪಟಾಕಿ ಹಾಗೂ ಕಲರ್ ಗೆ ಬೈ ಬೈ ಹೇಳಲು ನಿರ್ಧರಿಸಿದೆ. ಅವರ್ಸಾದ ಈ ಸಮಿತಿಯ ಪರಿಸರ ಸ್ನೇಹಿ, ಮಾದರಿ ಆಚರಣೆಗೆ ಮೆಚ್ಚಿದ ಪೊಲೀಸ್ ಇಲಾಖೆ ಎರಡು ಬಾರಿ ಪ್ರಶಸ್ತಿ ನೀಡಿ ಗೌರವಿಸಿದೆ.