ಮೈಸೂರು: “ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕರು ಕುಂಟು ನೆಪ ಹುಡುಕುತ್ತಿದ್ದಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ದಸರಾ ಉನ್ನತ ಸಮಿತಿ ಸಭೆಯಲ್ಲಿ ದಸರಾ ಉದ್ಘಾಟಕರ ಆಯ್ಕೆ ಅಧಿಕಾರವನ್ನು ನನಗೆ ನೀಡಿತ್ತು. ಈ ಹಿನ್ನೆಲೆ ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದೇನೆ. ನಾಡ ಹಬ್ಬ ದಸರಾ ಮಹೋತ್ಸವ ಎಲ್ಲಾ ಜಾತಿ-ಧರ್ಮಕ್ಕೆ ಸೇರಿದ ಧರ್ಮಾತೀತವಾದ ಹಬ್ಬವಾಗಿದೆ. ದಸರಾ ಉದ್ಘಾಟನೆಗೆ ಧರ್ಮದ ಲೇಪನ ಮಾಡುವುದು ಸರಿಯಲ್ಲ” ಎಂದರು.
“ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ಅವರು ನೀಡಿರುವ ಹಳೇ ಹೇಳಿಕೆಗೂ ಈಗ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದಕ್ಕೂ ಏನು ಸಂಬಂಧ, ಯಾವತ್ತೋ ಏನು ಹೇಳಿದ್ದಾರೆ ಎಂದು ಅದನ್ನು ದಸರಾಗೆ ಲಿಂಕ್ ಮಾಡುವುದು ಎಷ್ಟು ಸರಿ?. ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವುದನ್ನು ಧರ್ಮಾಂದರು ಮಾತ್ರ ವಿರೋಧಿಸುತ್ತಾರೆ. ಇತಿಹಾಸ ತಿಳಿಯದ ಬಿಜೆಪಿ ನಾಯಕರು ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಸಾಹಿತಿ ಕೆ.ಎಸ್. ನಿಸಾರ್ ಅಹಮ್ಮದ್ ಅವರು ದಸರಾ ಉದ್ಘಾಟನೆ ಮಾಡಿದ್ದಾರೆ. ಅಲ್ಲದೇ ಮಹಾರಾಜರ ಕಾಲದಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್ ದಸರಾವನ್ನು ಆಚರಣೆ ಮಾಡುತ್ತಿದ್ದರು. ನಂತರ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದಾಗ ದಸರಾವನ್ನು ವಿಜೃಂಭಣೆಯಿಂದ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ” ಎಂದು ಸಮರ್ಥಿಸಿಕೊಂಡರು.