ಬೆಳಗಾವಿ: ದರೋಡೆ, ಅತ್ಯಾಚಾರ ಪ್ರಕರಣದಡಿ ಪರಿಶೀಲನೆ ಮಾಡುತ್ತಿದ್ದ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಯತ್ನಿಸಿದ ಹಿನ್ನೆಲೆ ಆತನ ಮೇಲೆ ಪಿಎಸ್ಐ ಫೈರಿಂಗ್ ಮಾಡಿರುವ ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಶನಿವಾರ) ಬೆಳಗ್ಗೆ ನಡೆದಿದೆ.
ಬೆಳಗ್ಗೆ 6 ಗಂಟೆಗೆ ಆರೋಪಿ ರಮೇಶ ತಿಲಾರಿ ಎಂಬುವವನನ್ನು ಬಂಧಿಸಲು ಹೋದಾಗ ಷರೀಫ್ ದಫೇದಾರ್ ಸೇರಿ ಮತ್ತಿಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳ ಮೇಲೆ ಚಾಕು ಇರಿದು ಪರಾರಿಗೆ ಯತ್ನಿಸಿದ್ದ. ಈ ವೇಳೆ ಪಿಎಸ್ಐ ಪ್ರವೀಣ ಗಂಗೊಳ್ಳಿ ಗಾಳಿಯಲ್ಲಿ ಗುಂಡುಹಾರಿಸಿ ಆತನನ್ನು ಹೆದರಿಸಲು ಮುಂದಾಗಿದ್ದರು. ಆದರೆ, ಆತ ಇದಕ್ಕೂ ಜಗ್ಗದ ಹಿನ್ನೆಲೆ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದ್ದೇನು? ಕಳೆದ ಶನಿವಾರ ಎಂ. ಕೆ. ಹುಬ್ಬಳ್ಳಿಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಕಿತ್ತೂರು ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಈ ಪ್ರಕರಣದಲ್ಲಿ ಐವರು ಆರೋಪಿಗಳು ತಂಡವನ್ನ ಕಟ್ಟಿಕೊಂಡು ಜಿಲ್ಲೆಯಲ್ಲಿ ಸರಗಳ್ಳತನ ಮಾಡಿರೋದು ಗೊತ್ತಾಗಿತ್ತು. ಕಿತ್ತೂರು ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಗೋಕಾಕ್ ತಾಲೂಕಿನ ಬೆಣಚಿನಮರಡಿ ಗ್ರಾಮದ ರಮೇಶ ತಿಲಾರಿ ಪ್ರಮುಖ ಆರೋಪಿ ಎನ್ನುವುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಲ್ಸರ್ ಬೈಕ್ ಮೇಲೆ ಹೋಗುವಾಗ ಅಡ್ಡಗಟ್ಟಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ತನ್ನಲ್ಲಿರುವ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿ ಆರೋಪಿ ರಮೇಶ ತಿಲಾರಿ ಪರಾರಿ ಆಗಲು ಮುಂದಾಗಿದ್ದ. ಆಗ ಗಾಳಿಯಲ್ಲಿ ಗುಂಡು ಹೊಡೆದು ಎಚ್ಚರಿಕೆ ನೀಡಿದರೂ ಪೊಲೀಸರ ಮೇಲೆ ಪುನಃ ದಾಳಿಗೆ ಆರೋಪಿ ಯತ್ನಿಸಿದ್ದ. ಹೀಗಾಗಿ ಕಿತ್ತೂರು ಪಿಎಸ್ಐ ಪ್ರವೀಣ ಗಂಗೊಳ್ಳಿ ಸ್ವಯಂ ರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದ್ದಾರೆ.