ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗ ಮತ್ತು ಬೆಂಗಳೂರು ಮತ್ತು ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಈ ಕುರಿತು ವೇಳಾಪಟ್ಟಿ ಹಂಚಿಕೊಂಡಿರುವ ಸಿಎಂ ಕಚೇರಿ, ಮೋದಿ ನಾಲ್ಕು ಗಂಟೆಗಳ ಕಾಲ ಇರಲಿದ್ದು, ಈ ವೇಳೆ ಮೂರು ಕಾರ್ಯಕ್ರಮಗಳಲ್ಲಿ ಹಸಿರು ನಿಶಾನೆ ತೋರಲಿದ್ದಾರೆ.
ಬೆಳಗ್ಗೆ 10.30ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ, ಬಳಿಕ ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ತಲುಪಲಿದ್ದು, ಅಲ್ಲಿ ಬೆಂಗಳೂರು- ಬೆಳಗಾವಿ ನಡುವೆ ವಂದೇ ಭಾರತ್ ಟ್ರೈನ್ ಉದ್ಘಾಟನೆ ಮಾಡಲಿದ್ದಾರೆ.
ಬಳಿಕ ಇಲ್ಲಿಯೇ ವರ್ಚುವಲ್ ಆಗಿ ಅಮೃತ್ಸರ್- ಶ್ರೀ ಮತಾ ವೈಷ್ಣೋದೇವಿ ಕತ್ರಿ ಹಾಗೂ ಅಜ್ನಿ (ನಾಗಪುರ್)- ಪುಣೆಯ ಮತ್ತೆರಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.
ಬಳಿಕ ರಸ್ತೆ ಮಾರ್ಗದ ಮೂಲಕ ಆರ್ವಿ ರಸ್ತೆ (ರಾಗಿಗುಡ್ಡ) ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 11.45ರಿಂದ 12.50ರ ನಡುವೆ ಹಳದಿ ಮಾರ್ಗ ಲೋಕಾರ್ಪಣೆ ಮಾಡಿ, ಎಲೆಕ್ಟ್ರಾನಿಕ್ ಸಿಟಿ ಸ್ಟೇಷನ್ವರೆಗೆ ಮೆಟ್ರೋ ಪ್ರಯಾಣ ನಡೆಸಲಿದ್ದಾರೆ. 19.15 ಕಿ.ಮೀ ಉದ್ದದ ಆರ್ವಿ ರಸ್ತೆಯಿಂದ ಬೊಮ್ಮಸಂದ್ರ ಸಾಗಲಿರುವ ಹಳದಿ ಮೆಟ್ರೋ ಮಾರ್ಗದಲ್ಲಿ 16 ಸ್ಟೇಷನ್ ಬರಲಿದ್ದು, ಇದನ್ನು 5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಇದಾದ ಬಳಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಬೆಂಗಳೂರಿಗೆ ತೆರಳಲಿದ್ದು, ಇಲ್ಲಿ ಬೆಂಗಳೂರು ಮೆಟ್ರೋದ ಮೂರನೇ ಹಂತಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಹೆಚ್ಎಎಲ್ಗೆ ತೆರಳಿ, ಮಧ್ಯಾಹ್ನ 2.45ಕ್ಕೆ ದೆಹಲಿಯತ್ತ ಪ್ರಯಾಣ ಬೆಳಸಲಿದ್ದಾರೆ. ಮೆಟ್ರೋ 3ಹಂತದ ಯೋಜನೆ ಆರೇಂಜ್ ಲೈನ್ (ಕಿತ್ತಾಳೆ ಮಾರ್ಗ) ಆಗಿದ್ದು, ಇದು 44.65 ಕಿ.ಮೀ ದೂರ ಹೊಂದಿದ್ದು, ಇದನ್ನು ಅಂದಾಜು 15.611 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಇದಕ್ಕೆ ಕೂಡ ಮೋದಿ ಶಂಕು ಸ್ಥಾಪನೆ ನಡೆಸಲಿದ್ದಾರೆ.
ಹಳದಿ ಲೈನ್ ಮೆಟ್ರೋ ನಿಲ್ದಾಣ ಉದ್ಘಾಟನೆ ಹಿನ್ನೆಲೆ ಈ ಮಾರ್ಗದಲ್ಲಿ ಟ್ರಾಫಿಕ್ ದಟ್ಟಣೆ ಇರಲಿದೆ. ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಜಂಕ್ಷನ್ನಲ್ಲಿ ಪ್ರಯಾಣಿಕರ ಸಂಚಾರ ಸಮಸ್ಯೆ ಉಂಟಾಗಲಿದೆ.
Laxmi News 24×7