ಧರ್ಮಸ್ಥಳ (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮದಲ್ಲಿ ಹಲವು ಮೃತದೇಹಗಳನ್ನು ಹೂತಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಸ್ಐಟಿ ಶೋಧ ಕಾರ್ಯ ಮುಂದುವರಿಸಿದೆ. ಇಂದು ಬೋಳಿಯಾರ್ ಬಳಿ ದೂರುದಾರ ಗುರುತಿಸಿದ ಮತ್ತೊಂದು ಹೊಸ ಸ್ಥಳದಲ್ಲಿ ವಿಶೇಷ ತನಿಖಾ ಶೋಧ ಕಾರ್ಯಾಚರಣೆ ನಡೆಸಿತು.
ಧರ್ಮಸ್ಥಳ ಗ್ರಾಮದ ಬೊಳಿಯಾರ್ ಬಳಿಯ ಗೋಂಕ್ರತಾರ್ ಸಮೀಪದ ಅರಣ್ಯ ಪ್ರದೇಶಕ್ಕೆ ದೂರುದಾರನೊಂದಿಗೆ ಅಧಿಕಾರಿಗಳ ತಂಡ 1:15 ರಿಂದ ಸಂಜೆ 5:30 ಗಂಟೆಯವರೆಗೆ ಮಿನಿ ಜೆಸಿಬಿ ಮತ್ತು ಕಾರ್ಮಿಕರೊಂದಿಗೆ ಶೋಧ ಕಾರ್ಯ ನಡೆಸಿತು. ಸಂಜೆ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿ ಅಧಿಕಾರಿಗಳು ದೂರುದಾರನ ಜೊತೆ ವಾಪಸ್ ತೆರಳಿದ್ದಾರೆ.
ಎಸ್ಐಟಿ ಮೂಲಗಳ ಪ್ರಕಾರ, ಹೊಸ ಮಾಹಿತಿಯು ನಿರ್ದಿಷ್ಟ ಸುಳಿವುಗಳನ್ನು ಒದಗಿಸಿದ್ದರಿಂದ ಹೊಸ ಸ್ಥಳದಲ್ಲಿ ಎಸ್ಐಟಿ ಶೋಧ ನಡೆಸಿದೆ. ಬಿಗಿ ಭದ್ರತೆಯಲ್ಲಿ ನಡೆದ ಕಾರ್ಯಾಚರಣೆ ವೇಳೆ ವಿಧಿವಿಜ್ಞಾನ ತಜ್ಞರು ಮತ್ತು ತಾಂತ್ರಿಕ ಸಿಬ್ಬಂದಿ ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ.
ಹೊಸ ಸ್ಥಳದಲ್ಲಿ ಕುರುಹು ಪತ್ತೆಯಾಗಿರುವ ಬಗ್ಗೆ ಎಸ್‌ಐಟಿ ಇಲ್ಲಿಯವರೆಗೆ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ. ಎಲ್ಲಾ ಸುಳಿವುಗಳ ಬೆನ್ನಟ್ಟಿರುವ ಅಧಿಕಾರಿಗಳು, ವಿಧಿವಿಜ್ಞಾನ ಮೌಲ್ಯಮಾಪನ ಮತ್ತು ಕಾನೂನು ಪ್ರಕ್ರಿಯೆಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಧರ್ಮಸ್ಥಳ ಪ್ರಕರಣದ ತನಿಖೆಯು ಭಾರಿ ಸುದ್ದಿಯಾಗುತ್ತಿದೆ. ಊಹಾಪೋಹಗಳಿಂದ ದೂರವಿರಲು ಮತ್ತು ಎಸ್ಐಟಿ ತನ್ನ ಕೆಲಸವನ್ನು ಹಸ್ತಕ್ಷೇಪವಿಲ್ಲದೇ ಪೂರ್ಣಗೊಳಿಸಲು ಅವಕಾಶ ನೀಡುವಂತೆ ಮಾಧ್ಯಮ ಮತ್ತು ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೋರ್ವ ದೂರು ನೀಡಿದ ಬಳಿಕ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಯಾಗಿದೆ. ಈ ಸಂಬಂಧ ತನಿಖೆಗೆ ಎಸ್ಐಟಿ ರಚನೆಗೆ ಒತ್ತಾಯಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು.
ವಾರದಿಂದ ಶೋಧ: ಶವ ಹೂತು ಹಾಕಿರುವುದಾಗಿ ದೂರುದಾರನು ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿಯ ಅರಣ್ಯ ಪ್ರದೇಶದಲ್ಲಿ ಒಟ್ಟು 13 ಕಡೆಗಳಲ್ಲಿ ಸ್ಥಳವನ್ನು ಗುರುತಿಸಿದ್ದ. ಈ ಸ್ಥಳಗಳನ್ನು ಮಾರ್ಕ್ ಮಾಡಿಕೊಂಡ ಎಸ್ಐಟಿ ಕಳೆದ ಒಂದು ವಾರದಿಂದ ಶೋಧ ಕಾರ್ಯವನ್ನು ಮಾಡುತ್ತಿದೆ. ಗುರುತಿಸಿದ ಸ್ಥಳ ಹಾಗೂ ಅದು ಬಿಟ್ಟು ಬೇರೆಕಡೆ ಸೇರಿ ಎರಡು ಅವಶೇಷಗಳು ಪತ್ತೆಯಾಗಿವೆ.
ಎಸ್ಐಟಿ ತಂಡಕ್ಕೆ 20 ಮಂದಿ ಸಿಬ್ಬಂದಿ ನಿಯೋಜನೆ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) 20 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದರು.