ಬಾಲಕನ ಅಪಹರಿಸಿ ಬರ್ಬರ ಹತ್ಯೆ ಪ್ರಕರಣ: ಕಿಡ್ನಾಪ್‌ಗೆ ಒಂದು ತಿಂಗಳು ಹಿಂದೆಯೇ ಸಂಚು
ಬೆಂಗಳೂರು: ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಾಲಕನನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿ ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಮುಖ ಆರೋಪಿ ಗುರುಮೂರ್ತಿ, ಒಂದು ತಿಂಗಳ ಹಿಂದೆಯೇ ಬಾಲಕನ ಅಪಹರಣಕ್ಕೆ ಸಂಚು ರೂಪಿಸಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಜುಲೈ 30ರ ಸಂಜೆ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದ ಅರಕೆರೆ ಶಾಂತಿನಿಕೇತನ್ ಬಡಾವಣೆ ನಿವಾಸಿ ನಿಶ್ಚಿತ್ (13) ನನ್ನು, ಪರಿಚಯಸ್ಥನಾಗಿದ್ದ ಆರೋಪಿ ಗುರುಮೂರ್ತಿ ಅಪಹರಿಸಿ, ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಜುಲೈ 31ರಂದು ಬರ್ಬರವಾಗಿ ಕೊಲೆ ಮಾಡಿದ್ದ. ಬಾಲಕನ ಅಪಹರಿಸಿದ್ದ ಆರೋಪಿ 5 ಲಕ್ಷ ರೂ. ನೀಡುವಂತೆ ಪೋಷಕರಿಗೆ ಕರೆ ಮಾಡಿ ಬೇಡಿಕೆ ಇಟ್ಟಿದ್ದ. ಈ ವಿಷಯ ತಿಳಿದು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಪೊಲೀಸರು ಆತ್ಮರಕ್ಷಣೆಗಾಗಿ ಗುರುಮೂರ್ತಿ ಹಾಗೂ ಸಹ ಆರೋಪಿ ಗೋಪಿಕೃಷ್ಣ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಗಳಿಂದ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಬಾಲಕನನ್ನು ಅಪಹರಿಸಲು ಆತ ಒಂದು ತಿಂಗಳಿಂದ ಸಂಚು ರೂಪಿಸಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕನ ಪೋಷಕರಿಗೆ ಆರೋಪಿ ಪರಿಚಯವಾಗಿದ್ದು ಹೇಗೆ?: ಪ್ರಕರಣದ ದೂರುದಾರರಾಗಿರುವ ಬಾಲಕನ ತಂದೆ ಅಚ್ಯುತ್ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಪತ್ನಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಬಾಲಕನ ತಾಯಿಗೆ ಕಾರು ಚಾಲನೆ ಬಾರದಿದ್ದರಿಂದ ರೆಂಟಲ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡು, ಕಾರು ಚಾಲಕನ ಶೋಧ ನಡೆಸಿದಾಗ ಕೆಲ ತಿಂಗಳ ಹಿಂದೆ ಗುರುಮೂರ್ತಿಯ ಪರಿಚಯವಾಗಿತ್ತು. ಆಗಾಗ ಅರೆಕಾಲಿಕ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪರಿಚಯ ಆತ್ಮೀಯತೆಗೆ ತಿರುಗುತ್ತಿದ್ದಂತೆ ಆ್ಯಪ್ ಮುಖಾಂತರ ಬುಕ್ ಮಾಡದೆ ನೇರವಾಗಿ ಸಂಪರ್ಕಿಸುವಂತೆ ಹೇಳಿದ್ದ. ಇದರಿಂದ ಹಣವು ಉಳಿತಾಯವಾಗಲಿದೆ ಎಂದು ಆರೋಪಿ ನಂಬಿಸಿದ್ದ.
ದಂಪತಿಗೆ ನಿಶ್ಚಿತ್ ಒಬ್ಬನೇ ಮಗನಾಗಿದ್ದು, ಕುಟುಂಬವು ಸಿರಿವಂತರಾಗಿದ್ದರಿಂದ ಅಪಹರಿಸಿದರೆ ಸುಲಭವಾಗಿ ಹಣ ಸಂಪಾದಿಸಬಹುದೆಂದು ಭಾವಿಸಿ, ಕಿಡ್ನ್ಯಾಪ್ಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ