ಬೆಂಗಳೂರು: ನಟ ದರ್ಶನ್ ಅಭಿಮಾನಿಗಳು ಆಶ್ಲೀಲವಾಗಿ ಸಂದೇಶ ಕಳುಹಿಸಿದ ಆರೋಪದಡಿ ನಿನ್ನೆಯಷ್ಟೇ ನಟಿ ರಮ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್-4ರ ವಿಜೇತ ಹಾಗೂ ನಟ ಪ್ರಥಮ್ ಕೂಡ ಇಂದು ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿ.ಕೆ. ಬಾಬಾ ಅವರನ್ನು ಭೇಟಿಯಾಗಿ ಪ್ರಥಮ್ ದೂರು ನೀಡಿದರು. ‘ನಟ ದರ್ಶನ್ ಅವರೊಂದಿಗೆ ಜೈಲಿನ ಒಂದೇ ಬ್ಯಾರಕ್ನಲ್ಲಿದ್ದ ವ್ಯಕ್ತಿಯೋರ್ವ ನನ್ನನ್ನು ಉದ್ದೇಶಿಸಿ ಬಾಸ್ (ದರ್ಶನ್) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತೀಯಾ ಎಂದು ಹೇಳಿ ಡ್ರ್ಯಾಗರ್ ಹಾಗೂ ಚಾಕು ತೋರಿಸಿ ಚುಚ್ಚಲು ಯತ್ನಿಸಿದ್ದಾರೆ’ ಎಂದು ಪ್ರಥಮ್ ದೂರಿನಲ್ಲಿ ಆರೋಪಿಸಿದ್ದಾರೆ.500ಕ್ಕೂ ಹೆಚ್ಚು ಪೇಜ್ಗಳಿಂದ ತೇಜೋವಧೆ: ಈ ಬೆಳವಣಿಗೆ ನಡುವೆ ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್ ಡಿ ಡೈನಾಸ್ಟಿ, ಡಿ ಕಿಂಗ್ ಡಮ್, ಡಿ ಯೂನಿವರ್ಸ್ ಮತ್ತು ಡೆವಿಲ್ ಕಿಂಗ್ ಡಮ್ ಸೇರಿದಂತೆ 500ಕ್ಕೂ ಹೆಚ್ಚು ಇನ್ ಸ್ಟ್ರಾಗ್ರಾಮ್ ಪೇಜ್ಗಳಿಂದ ನನ್ನ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನನಗೆ ಜೀವಭಯವಿದ್ದು ರಕ್ಷಣೆಯ ಅಗತ್ಯವಿದೆ. ಘಟನೆ ಸಂಬಂಧ ಒಂದು ವಾರದಿಂದ ನನಗೆ ತೊಂದರೆ ಮಾಡಿದ್ದವರ ಬಗ್ಗೆ ಬುದ್ಧಿ ಹೇಳಿಸಿ ರಾಜಿಯಾಗಲು ದರ್ಶನ್ ಆಪ್ತರು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಪ್ರಥಮ್ ತಿಳಿಸಿದ್ದಾರೆ.