ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ತಡೆ ಕಾಯ್ದೆಯಡಿಯಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಹೆಚ್ಚಿನ ಕಾಲಾವಕಾಶ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಯಾದಗಿರಿಯ ಪ್ರಕರಣವೊಂದರಲ್ಲಿ ಖುಲಾಸೆಗೊಂಡಿದ್ದ ಆರೋಪಿಯ ವಿರುದ್ಧ 381 ದಿನ ತಡವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.
ರಾಜ್ಯ ಸರ್ಕಾರದ ಪರವಾಗಿ ಶಹಾಪುರ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಸದ್ಯದ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ 14ಎ(3)ರಡಿ ವಿಶೇಷ ಕೋರ್ಟ್ಗಳು ಆರೋಪಿಯನ್ನು ಖುಲಾಸೆಗೊಳಿಸಿದ್ದರೆ ಅಂತಹ ಆದೇಶಗಳನ್ನು ಪ್ರಶ್ನಿಸಲು 180 ದಿನ ಸಮಯಾವಕಾಶ ನೀಡಲಾಗಿದೆ. ಅದನ್ನು ಹೆಚ್ಚಳ ಮಾಡಬೇಕಾದರೆ ಶಾಸನ ಸಭೆ ನಿರ್ಧರಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ವಾದಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ 14ಎ(3)ರಲ್ಲಿ ಬಳಸಿರುವಂತೆ 180 ದಿನಗಳ ನಂತರ ಸಲ್ಲಿಸುವ ಯಾವುದೇ ಮೇಲ್ಮನವಿಗಳನ್ನು ನ್ಯಾಯಾಲಯಗಳು ಪುರಸ್ಕರಿಸುವಂತಿಲ್ಲ. ಆದರೆ, ಸರ್ಕಾರದ ಪರ ವಕೀಲರ ಕಾಳಜಿ ಅರ್ಥವಾಗುತ್ತದೆ, ಹಾಗೇನಾದರೂ ಮೇಲ್ಮನವಿ ವಿಚಾರಣೆಗೆ ಸ್ವೀಕರಿಸಬೇಕಾದರೆ ಸಮಯಾವಕಾಶ ಹೆಚ್ಚಳ ಮಾಡಬೇಕಾಗುತ್ತದೆ. ಅದಕ್ಕೆ ಉತ್ತರ ಶಾಸಕಾಂಗದ ಬಳಿ ಇದೆ ಎಂದು ಪೀಠ ಹೇಳಿದೆ.
ಕೆಲವು ಪ್ರಕರಣಗಳಲ್ಲಿ ನಿರ್ಲಕ್ಷ್ಯಕ್ಕಿಂತ ಹೆಚ್ಚಾಗಿ, ನೈಜ ಪ್ರಕ್ರಿಯೆಗಳ ಕಾರಣಕ್ಕೆ ವಿಳಂಬವಾಗಬಹುದು. ಹಾಗಾಗಿ ಶಾಸಕಾಂಗ ತಿದ್ದುಪಡಿ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಆದ್ದರಿಂದ ಎಸ್ಪಿಪಿ ಈ ವಿಚಾರವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ತಿದ್ದುಪಡಿಗೆ ಸಲಹೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.