ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿ, ಜೈಲು ಸೇರಿದ್ದ ಶಿಕ್ಷಾಬಂಧಿಯಲ್ಲಿದ್ದ ಸುಪ್ತ ಪ್ರತಿಭೆ ಗುರುತಿಸಿ ಅವರಿಂದ ಪರಪ್ಪನ ಅಗ್ರಹಾರ ಜೈಲಧಿಕಾರಿಗಳು ತತ್ವಪದ ಹಾಡಿಸಿದ್ದಾರೆ. ಗೀತ ರಚನೆಕಾರ ಹಾಗೂ ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಅವರ ಸಾಹಿತ್ಯದಲ್ಲಿ ಮೂಡಿಬಂದ ‘ಉತ್ತಮರ ಸಂಗ’ ಎಂಬ ಹಾಡನ್ನು ಕೈದಿ ಅರುಣ್ ಆಚಾರ್ ಹಾಡಿದ್ಧಾರೆ.
ಈ ಹಾಡಿನ ಮೇಕಿಂಗ್ ವಿಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ಬೆಂಗಳೂರು ಕೇಂದ್ರ ಕಾರಾಗೃಹದ ಹೊರ ಆವರಣದಲ್ಲಿ ನಿರ್ಮಿಸಿರುವ ವಸತಿಗೃಹಗಳ ಉದ್ಘಾಟನೆ ಹಾಗೂ ಪ್ರಧಾನ ಕಚೇರಿಯ ಅನ್ಸೆಕ್ಸ್ ಕಟ್ಟಡ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿರುವ ಕೈದಿಗಳಿಗೆ ಮನಪರಿವರ್ತಿಸುವ ಹಾಗೂ ಉತ್ತಮ ಸಮಾಜದೆಡೆಗೆ ಸ್ಫೂರ್ತಿ ನೀಡುವ ಹಾಡು ಇದಾಗಿದೆ. ಗಾಯನದಲ್ಲಿ ಆಸಕ್ತಿಯಿರುವುದನ್ನು ಕಂಡ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಕೆ.ಸುರೇಶ್ ಅವರು ಗುರುತಿಸಿ, ಪರಿಚಯವಿದ್ದ ಕೆ.ಕಲ್ಯಾಣ್ ಅವರಿಗೆ ಗಮನಕ್ಕೆ ತಂದಿದ್ದರು.