ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದ ಶಾಸಕರುಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಅನಿಶ್ಚಿತತೆ ಕಾಡುತ್ತಿದೆ. ರಣದೀಪ್ ಸಿಂಗ್ ಸುರ್ಜೆವಾಲ ಅವರು ಪದೇ ಪದೆ ಬೆಂಗಳೂರಿಗೆ ಬರ್ತಾ ಇದ್ದಾರೆ. ಬಂದಾಗಲೆಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅವರು ಬೆಂಗಳೂರಿನಲ್ಲಿ ಮೂರು ದಿನಗಳವರೆಗೆ ಇರ್ತಾರೆ. ಇದರ ಹಿನ್ನೆಲೆ ಏನಂದ್ರೆ, ಡಿ. ಕೆ. ಶಿವಕುಮಾರ್ ಜೊತೆ ನೂರು ಜನ ಶಾಸಕರಿದ್ದಾರೆ. ಅವರಿಗೂ ಅವಕಾಶ ಕೂಡಬೇಕು ಎಂಬ ನಾನಾ ಹೇಳಿಕೆ ನೀಡುತ್ತಿದ್ದಾರೆ. ಬಿ. ಆರ್. ಪಾಟೀಲ್ ಹಾಗೂ ರಾಜು ಕಾಗೆ ಹೇಳಿಕೆ ನೋಡಿದ್ರೆ ಗೊತ್ತಾಗುತ್ತದೆ. ಒಂದಂತೂ ಸತ್ಯ, ಆಡಳಿತ ಪಕ್ಷದ ಶಾಸಕರು ಸಿಎಂ ಅವರ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಸ್ಥಾನಪಲ್ಲಟವಾದರೆ ನಮ್ಮ ಪಕ್ಷ, ರಾಜ್ಯದ ಜನರಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ: ಅದೇ ರೀತಿ ರಾಜ್ಯದ ಜನರಿಗೂ ಸಹ ವಿಶ್ವಾಸವಿಲ್ಲ. ಮುಂದಿನ ದಿನಗಳಲ್ಲಿ ಯಾವ ರೀತಿ ಸ್ಥಾನ ಪಲ್ಲಟ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸಿಎಂ ಸ್ಥಾನ ಬದಲಾವಣೆ ಆದ್ರೆ ನಮ್ಮ ಪಕ್ಷಕ್ಕೂ ಹಾಗೂ ರಾಜ್ಯದ ಜನರಿಗೂ ಸಹ ವ್ಯತ್ಯಾಸವಾಗಲ್ಲ. 15ನೇ ಬಜೆಟ್ ಮಂಡನೆ ಮಾಡಿದ ಅನುಭವಿ ಸಿಎಂ ಸಿದ್ದರಾಮಯ್ಯನವರ ಆಡಳಿತ ವ್ಯವಸ್ಥೆ ಹೇಗೆ ಕುಸಿದು ಬಿದ್ದಿದೆ ಅಂದ್ರೆ ಹಣಕಾಸಿನ ಪರಿಸ್ಥಿತಿ ಕುಸಿದಿದ್ದು, ಯಾರೇ ಸಿಎಂ ಆಗಿ ಬಂದ್ರೂ ಸಹ ಅಭಿವೃದ್ದಿ ಸಾಧ್ಯವಿಲ್ಲ ಎಂಬಂತೆ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರಾ, ಯಾರು ಅವರನ್ನು ಇಂಪ್ರೇಸ್ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಒಂದಂತೂ ಸತ್ಯ ಸುರ್ಜೆವಾಲ ಅವರು ಸುಮ್ಮನೆ ಕರ್ನಾಟಕಕ್ಕೆ ಬರ್ತಾ ಇಲ್ಲ. ಏನಾದ್ರೂ ಒಂದು ಅಜೆಂಡಾ ಇಟ್ಟುಕೊಂಡೇ ಬರುತ್ತಿದ್ದಾರೆ. ಅವರು ತನ್ನ ಅಜೆಂಡಾವನ್ನು ಜಾರಿ ಮಾಡಲು ಬರ್ತಾ ಇದ್ದಾರೆ. ಅದು ಸಿಎಂ ಹಾಗೂ ಆಡಳಿತ ಪಕ್ಷದ ಎಲ್ಲಾರಿಗೂ ಗೊತ್ತಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಶಿವಮೊಗ್ಗ, ಮಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಯೂ ಸಹ ದೇಶದ್ರೋಹಿಗಳಿದ್ದಾರೆ. ಅವರು ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬಾರದು, ಎರಡು ಧರ್ಮಗಳ ವಿರುದ್ದ ಸಂಘರ್ಷ ನಡೆಯುತ್ತಲೇ ಇರಬೇಕು. ಈ ದುರುದ್ದೇಶದಿಂದಲೇ ಘಟನೆಗಳು ನಡೆಯುತ್ತಿವೆ. ಆದರೆ, ದುರಂತ ಏನಂದ್ರೆ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮಂಗಳೂರಿನಲ್ಲಿ ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣ ಇರಬಹುದು. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನೇ ಬೆದರಿಸುವ ಕುತಂತ್ರ ನಡೆಸಲಾಗುತ್ತಿದೆ ಎಂದು ತಿಳಿಸಿದರು.