ಕೊಪ್ಪಳ: ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹೃದಯ ಭಾಗವಾದ ಸಿಂಧನೂರು ಸರ್ಕಲ್ನಲ್ಲಿ ಭಾನುವಾರ ರಾತ್ರಿ ಸಿನಿಮಾ ಸ್ಟೈಲ್ನಲ್ಲಿ ನಡೆದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿಟಿವಿಯಲ್ಲಿ ಕೊಲೆ ದೃಶ್ಯ ಸೆರೆ: ಸಿಂಧನೂರು ಸರ್ಕಲ್ನಲ್ಲಿರುವ ಬೇಕರಿಯೊಂದರ ಮುಂಭಾಗದಲ್ಲಿ ಚೆನ್ನಪ್ಪ ನಾರಿನಾಳ ಎಂಬ ವ್ಯಕ್ತಿಯ ಕೊಲೆಯಾಗಿದ್ದು, ಕೊಲೆಯ ಸಂಪೂರ್ಣ ಚಿತ್ರಣ ಬೇಕರಿಯಲ್ಲಿ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಮೇಲೆ ಬರುತ್ತಿದ್ದ ಚೆನ್ನಪ್ಪನನ್ನು ಅಟ್ಟಾಡಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು, ಎರಡೇ ನಿಮಿಷದಲ್ಲಿ ಕೊಲೆ ಮಾಡಿ ಪರಾರಿಯಾಗುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಬೇಕರಿ ಒಳ ನುಗ್ಗಿ ಕೊಲೆ: ತಾವರಗೇರಾ ಪಟ್ಟಣದಲ್ಲಿರುವ ಬೇಕರಿಯೊಂದಕ್ಕೆ ಬಂದಿದ್ದ ಚೆನ್ನಪ್ಪ, ವ್ಯಾಪಾರ ಮಾಡುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಆತನ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಚೆನ್ನಪ್ಪ ಬೇಕರಿ ಹೊಕ್ಕಿದ್ದು, ಅಲ್ಲಿಯೂ ಬಂದು ಹಲ್ಲೆ ನಡೆಸಿದ್ದಾರೆ. ಹೊರಗೆ ಓಡಲು ಪ್ರಯತ್ನಿಸಿದಾಗಲೂ ಚನ್ನಪ್ಪನನ್ನು ಸುತ್ತುವರೆದ ದುಷ್ಕರ್ಮಿಗಳ ತಂಡ, ಮಚ್ಚು ಮತ್ತು ದೊಣ್ಣೆಗಳಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಕೈ ಮುಗಿದು ಬೇಡಿಕೊಂಡರೂ ಬಿಡದೇ ಬೇಕರಿಯಿಂದ ಹೊರಗಡೆ ಎಳೆದಿದ್ದಾರೆ.