ಮಾತು ಎತ್ತಿದರೆ ದೇಶಾಭಿಮಾನ ಮಾತನಾಡುವ ನಾಯಕರೇ… ಇತ್ತ ಕಡೆ ನೋಡಿ?…
ರಾಷ್ಟ್ರಧ್ವಜ ಬಟ್ಟೆ ನೇಯುವ ನೇಕಾರ ಮಹಿಳೆಯರಿಗಿಲ್ಲ ಸಮರ್ಪಕ ಕೂಲಿ…ಗೋಳು ಕೇಳದ ಸರ್ಕಾರ…ಅತಂತ್ರ ಕುಟುಂಬಗಳು…
ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಕಂಡರೇ ಸಾಕು. ಅದರ ಹಿಂದಿನ ತ್ಯಾಗಬಲಿದಾನಗಳು ನೆನಪಾಗಿ, ತನ್ನಿಂದ ತಾನೇ ಗೌರವ ವಂದನೆ ಸಲ್ಲಿಸುತ್ತೇವೆ.
ಇಷ್ಟೊಂದು ಅಮೂಲ್ಯವಾದದ್ದು ನಮ್ಮ ರಾಷ್ಟ್ರಧ್ವಜ ಆದರೇ ನೇಯುವ ಕಾರ್ಮಿಕರಿಗೆ ಮಾತ್ರ ಸರಿಯಾದ ಮೂಲ್ಯವಿಲ್ಲವೇನೋ ಎಂಬ ಪ್ರಶ್ನೆ ಮೂಡುತ್ತಿದೆ. ನಮ್ಮ ರಾಷ್ಟ್ರ ಎಲ್ಲದ್ದರಲೂ ಮುಂಚೂಣಿಯಲ್ಲಿದೆ. ಆದರೇ, ಧ್ವಜ ನೇಯುವವರ ಬದುಕು ದುಸ್ತರವಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ಹೌದು, ಆಗಸ್ಟ್ 15 ಮತ್ತು ಜನವರಿ 26 ರಂದು ದೇಶಾದ್ಯಂತ ಕೇಸರಿ ಬಿಳಿ ಹಸಿರು ಬಣ್ಣದ ಭಾರತೀಯ ಧ್ವಜ ಎಲ್ಲೆಡೆ ಹಾರಾಡುತ್ತವೆ. ಈ ತ್ರಿವರ್ಣ ಧ್ವಜಕ್ಕೆ ತನ್ನದೇಯಾದ ಇತಿಹಾಸ ಮತ್ತು ಗೌರವವಿದೆ. ದೇಶದ ಧ್ವಜಕ್ಕೆ ತನ್ನದೇಯಾದ ಕಿಮ್ಮತ್ತಿದೆ. ಆದರೇ, ಇದನ್ನು ನೇಯುವ ಕಾರ್ಮಿಕರಿಗೆ ಕಷ್ಟಕ್ಕೆ ಮಾತ್ರ ಕಿಮ್ಮತ್ತು ಇಲ್ಲವೇನೋ ಎಂಬಂತಾಗಿದೆ. ದೇಶದ ಹೆಮ್ಮೆಯ ಪ್ರತೀಕವಾಗಿ ರಾಷ್ಟ್ರಧ್ವಜದ ಬಟ್ಟೆ ನೇಯುವ ನೇಕಾರ ಮಹಿಳೆಯರಿಗೆ ಸಮರ್ಪಕ ಕೂಲಿ ಇಲ್ಲದಾಗಿದೆ.
ರಾಷ್ಟ್ರೀಯ ದಿನಾಚರಣೆ ಆಚರಿಸುವ ನಾಯಕರಿಗೆ ರಾಷ್ಟ್ರಧ್ವಜದ ಬಟ್ಟೆ ನೇಯುವ ಮಹಿಳೆಯರ ಗೋಳು ನೆನಪಾಗುವುದೇ ಇಲ್ಲ. ಬಾಗಲಕೋಟೆಯ ತುಳಸಿಗೇರಿ ಗ್ರಾಮದಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಕಳೆದ ೨೦ ವರ್ಷಗಳಿಂದಲೂ ರಾಷ್ಟ್ರದ್ವಜ ಬಟ್ಟೆ ನೇಯುವ ನೇಕಾರ ಮಹಿಳೆಯರ ಗೋಳು ಯಾರೂ ಕೇಳುತ್ತಿಲ್ಲ.
ಒಂದು ಮೀಟರ್ ರಾಷ್ಟ್ರಧ್ವಜ ಬಟ್ಟೆ ನೇಯ್ದರೆ ಕೇವಲ 32 ರೂಪಾಯಿ ಸಿಗುತ್ತದೆ.
ಪ್ರತಿದಿನ 6 ಮೀಟರ್ ರಾಷ್ಟ್ರಧ್ವಜದ ಬಟ್ಟೆಯನ್ನು ಇವರು ನೇಯುತ್ತಾರೆ. ಆದರೀಗ ತುಟ್ಟಿ ಕಾಲದಲ್ಲಿ ಕಡಿಮೆ ಕೂಲಿಯಿಂದ ಮನೆ ನಡೆಸಲು ಸಾಧ್ಯವಾಗದೇ ಇವರ ಬದುಕು ಅತಂತ್ರವಾಗಿದೆ.
ಮಕ್ಕಳ ಶಾಲೆ, ಮದುವೆ ಮುಂಜಿವಿಗೆ ಸಾಲ ಮಾಡದೇ ವಿಧಿಯಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿ ಗೋಗರೆದರೂ ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ. ದಿನೇ ದಿನೇ ಕೂಲಿ ಕಡಿಮೆಯಾದಂತೆ ಬೇರೆ ಬೇರೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ.
ದಿನವಿಡೀ ಕೈಮಗ್ಗದ ಮೂಲಕ ಬಟ್ಟೆ ನೇಯ್ದು ಸಮರ್ಪಕ ಕೂಲಿ ಸಿಗದೇ ಮನೆಗೆ ತೆರಳುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಇವರ ಸಹಾಯ ಸಿಗುವುದು ಅತ್ಯಗತ್ಯವಾಗಿದೆ.