ಬೆಳಗಾವಿ: ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಯೋಜನೆಯಲ್ಲಿ 600 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಂದು ತಿಂಗಳಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಟೆಂಡರ್ ಕರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ಬೆಳಗಾವಿ ಜಿಲ್ಲೆಯ 600 ಏಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದೆ.
ಬೆಳಗಾವಿ-ಧಾರವಾಡ ಮಧ್ಯೆ ಸದ್ಯ ಲೋಂಡಾ ಮಾರ್ಗವಾಗಿ ರೈಲು ಸಂಚರಿಸುತ್ತಿದೆ. ಈ ಯೋಜನೆಯಿಂದ ಕಿತ್ತೂರು ಮಾರ್ಗವಾಗಿ ಉಭಯ ನಗರಗಳ ನಡುವೆ ರೈಲು ಸಂಚರಿಸಬಹುದು. ಇದರಿಂದ ಮೂರು ಗಂಟೆಯ ಬದಲಾಗಿ ಕೇವಲ ಒಂದೂವರೆ ಗಂಟೆಯಲ್ಲಿ ಬೆಳಗಾವಿ-ಧಾರವಾಡ ಮಧ್ಯೆ ಪ್ರಯಾಣಿಸಬಹುದು. ಈ ರೈಲು ಯೋಜನೆ ಕಾಮಗಾರಿ ಪೂರ್ಣಗೊಂಡ ಬಳಿಕ ಬೆಳಗಾವಿ-ಧಾರವಾಡ ಹಾಗೂ ಹುಬ್ಬಳ್ಳಿ ತ್ರಿವಳಿ ನಗರವಾಗಿ ಅಭಿವೃದ್ಧಿಗೆ ಪೂರಕವಾಗಲಿದೆ.
2020ರಲ್ಲಿ ಸುರೇಶ ಅಂಗಡಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಇದಕ್ಕಾಗಿ 900 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿತ್ತು. ಬಳಿಕ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಹಿನ್ನೆಲೆಯಲ್ಲಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಕಳೆದ ಒಂದು ವರ್ಷದಿಂದ ಸಂಸದ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ನಿರಂತರ ಸಭೆ ನಡೆದಿದ್ದು, ಈಗ ಬೆಳಗಾವಿ ಜಿಲ್ಲೆಯಲ್ಲಿ 600 ಎಕರೆ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದೆ.
Laxmi News 24×7