ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರಡಿ (ಆರ್‌ಟಿಇ) ಮೊದಲ ಬಾರಿಗೆ ಎಸ್ಎಸ್ಎಲ್ಸಿಯಲ್ಲಿ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳ ಪೈಕಿ ಶೇ.75ರಷ್ಟು ಮಂದಿ ಉತ್ತೀರ್ಣರಾಗಿದ್ಧಾರೆ.
25,453 ವಿದ್ಯಾರ್ಥಿಗಳ ಪೈಕಿ 19,235 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2009ರಲ್ಲಿ ಆರ್‌ಟಿಇ ಕಾಯ್ದೆ ಬಂದಿತ್ತು. 2013-14ನೇ ಶೈಕ್ಷಣಿಕ ಸಾಲಿನಲ್ಲಿ ಎಲ್ಕೆಜಿ ಅಥವಾ 1ನೇ ತರಗತಿಗೆ ಕಾಯ್ದೆಯಡಿ ಖಾಸಗಿ ಅನುದಾನಿತ ಶಾಲೆಗಳಲ್ಲಿ ಶೇ.25ರಷ್ಟು ದಾಖಲಾತಿ ಪಡೆದಿದ್ದ ವಿದ್ಯಾರ್ಥಿಗಳು ಮೊದಲ ಬಾರಿ ಈ ಬಾರಿ ಪರೀಕ್ಷೆ ಎದುರಿಸಿದ್ದರು. ಉತ್ತೀರ್ಣರಾದ 19,235 ವಿದ್ಯಾರ್ಥಿಗಳ ಪೈಕಿ ಗರಿಷ್ಠ 625 ಅಂಕಗಳಿಗೆ ಸುಮಾರು 50 ವಿದ್ಯಾರ್ಥಿಗಳು 620ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಆರ್ಟಿಇಯಡಿ ಶೇ.25ರಷ್ಟು ಶಾಲೆಗಳಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ 8ನೇ ತರಗತಿವರೆಗೂ ವಿದ್ಯಾಭ್ಯಾಸದ ಖರ್ಚನ್ನು ಸರ್ಕಾರ ಭರಿಸುತ್ತಿದೆ.
ಈ ಬಗ್ಗೆ ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ ಪ್ರತಿಕ್ರಿಯಿಸಿದ್ದು, ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಶೇ.75.57ರಷ್ಟು ಉತ್ತೀರ್ಣರಾಗುವ ಮೂಲಕ ಈ ಬಾರಿಯ ಫಲಿತಾಂಶದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಆರ್ಥಿಕ, ಹಿಂದುಳಿದ ಬಡತನ ರೇಖೆಗಿಂತ ಕೆಳಗಿರುವ ದುರ್ಬಲ ವರ್ಗದ ಈ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಪ್ರಶಂಶನೀಯ. ರಾಜ್ಯಮಟ್ಟದಲ್ಲಿ ಉತ್ತಮ ಅಂಕ ಗಳಿಸಿರುವ ಕನಿಷ್ಠ 50 ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರ ಅಭಿನಂದಿಸಿ ಸನ್ಮಾನಿಸಬೇಕು ಎಂದು ಮನವಿ ಮಾಡಿದರು.
ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಸಲ್ಲಿಸಿದ್ದೆವು. ನಮ್ಮ ಮನವಿ ಪುರಸ್ಕರಿಸಿದ ಇಲಾಖೆಯು ಆರ್‌ಟಿಇ ವಿದ್ಯಾರ್ಥಿಗಳ ಫಲಿತಾಂಶ ಸಾಧನೆಯನ್ನು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದರು.