ಬಂಟ್ವಾಳ (ದ.ಕ): ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಅಂತ್ಯಕ್ರಿಯೆ ಕಾರಿಂಜದಲ್ಲಿ ಶುಕ್ರವಾರ ಸಂಜೆ ನಡೆಯಿತು. ಅದಕ್ಕೂ ಮುನ್ನ ಅವರ ಅಂತಿಮ ಯಾತ್ರೆಯನ್ನು ನಡೆಸಲಾಯಿತು. ಮಂಗಳೂರಿನ ಆಸ್ಪತ್ರೆಯಿಂದ ಕಾರಿಂಜದವರೆಗೆ ನಡೆದ ಅಂತಿಮ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಬಜರಂಗದಳದ ಆಂಬ್ಯುಲೆನ್ಸ್ನಲ್ಲಿ ಅವರ ಶವವನ್ನು ಕರೆತಂದ ಸಂದರ್ಭ ದಾರಿಯುದ್ದಕ್ಕೂ ಹಿಂದೂ ಸಂಘಟನೆ ಕಾರ್ಯಕರ್ತರು ಪುಷ್ಪನಮನ ಸಲ್ಲಿಸಿದರು.
ಫರಂಗಿಪೇಟೆ, ತುಂಬೆ ಕಡೆಗೋಳಿ, ಬಿ.ಸಿ.ರೋಡ್, ಬಂಟ್ವಾಳ, ವಗ್ಗ ಮೂಲಕ ಕಾರಿಂಜದ ಅವರ ನಿವಾಸಕ್ಕೆ ತೆರಳಿದಾಗ ಮಧ್ಯಾಹ್ನವಾಗಿತ್ತು. ಅಷ್ಟರಾಗಲೇ ಬೈಕ್, ಕಾರುಗಳಲ್ಲಿ ಕಾರ್ಯಕರ್ತರು ಆಗಮಿಸಿ, ಮನೆಗೆ ತೆರಳುವ ದಾರಿಯ ಮಣ್ಣನ್ನು ಸಮತಟ್ಟು ಮಾಡಿ ವಾಹನ ಬರಲು ಅನುವುಮಾಡಿಕೊಟ್ಟರು. ಬಳಿಕ ಕಾರಿಂಜದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರ ಸಮ್ಮುಖದಲ್ಲಿ ವಿಧಿ ವಿಧಾನಗಳಂತೆ ಸುಹಾಸ್ ಶೆಟ್ಟಿ ಅಂತ್ಯಕ್ರಿಯೆ ನಡೆಸಲಾಯಿತು.
ರಾಜಕಾರಣಿಗಳು, ಸಂಘಟನೆ ಮುಖಂಡರ ದಂಡು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಡಾ. ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಕಿಶೋರ್ ಕುಮಾರ್ ಪುತ್ತೂರು, ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಪುನೀತ್ ಕೆರೆಹಳ್ಳಿ, ವಿಶ್ವ ಹಿಂದೂ ಪರಿಷತ್, ಆರ್ಎಸ್ಎಸ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಪ್ರಮುಖರು ಸುಹಾಸ್ ಶೆಟ್ಟಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಅದಕ್ಕೂ ಮುನ್ನ ಅಂತಿಮ ಯಾತ್ರೆಯಲ್ಲೂ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.
ಎನ್ಐಎ ತನಿಖೆಗೆ ವಿಜಯೇಂದ್ರ ಒತ್ತಾಯ, 25 ಲಕ್ಷ ರೂ. ಪಕ್ಷದ ನೆರವು ಘೋಷಣೆ: ಸುಹಾಸ್ ಹತ್ಯೆ ಪ್ರಕರಣವು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಆಗಬೇಕು. ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ, ಈ ಬಡ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಪಕ್ಷದ ಪರವಾಗಿ ಸುಹಾಸ್ ಕುಟುಂಬಕ್ಕೆ 25 ಲಕ್ಷ ರೂ. ಗಳನ್ನು ನೀಡುತ್ತಿದ್ದೇವೆ ಎಂದರು.