Breaking News

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆ ಭಾಗದ ಶಾಸಕರ ಜತೆ ಪ್ರತ್ಯೇಕ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್.

Spread the love

ಬೆಂಗಳೂರು : “ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಭಾಗದ ಎಲ್ಲಾ ಶಾಸಕರ ಜತೆಗೆ ನಾನು ಹಾಗೂ ಪ್ರವಾಸೋದ್ಯಮ ಸಚಿವರು ಪ್ರತ್ಯೇಕವಾಗಿ ಸಭೆ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಅವರು ಮಂಗಳವಾರ ಮಾತನಾಡಿದರು.

ಬಿಜೆಪಿ ಶಾಸಕ ಗುರುರಾಜಶೆಟ್ಟಿ ಗಂಟಿಹೊಳೆ ಅವರು ರಾಜ್ಯ ಪ್ರವಾಸೋದ್ಯಮ ನೀತಿ ವಿಚಾರವಾಗಿ ಕರಾವಳಿ ಭಾಗವನ್ನು ವಿಶೇಷವಾಗಿ ಪರಿಗಣಿಸಬೇಕು ಎಂದು ಕೇಳಿದಾಗ ಪ್ರವಾಸೋದ್ಯಮ ಸಚಿವರು ಈ ಬಗ್ಗೆ ನಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಕರಾವಳಿ ಭಾಗದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಬರುವ ಜನರನ್ನು ಇತರೇ ಪ್ರವಾಸೋದ್ಯಮ ಸ್ಥಳಗಳಿಗೆ ಆಕರ್ಷಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಅವರು, “ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಬಹುತೇಕ ಯುವಕರು ಗೆದ್ದು ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಸೇರಿದಂತೆ ದೊಡ್ಡ ಅವಕಾಶ ಕರಾವಳಿ ಭಾಗದಲ್ಲಿದೆ. ಹೀಗಾಗಿ ನಮ್ಮ ಸಚಿವರಾದ ಹೆಚ್.ಕೆ ಪಾಟೀಲ್ ಅವರು ದೊಡ್ಡ ಕನಸು ಕಂಡಿದ್ದು ನಾವು ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ಈ ಭಾಗದ ಶಾಸಕರ ಸಭೆ ಕರೆದು ಮಾತನಾಡಬೇಕಿದೆ. ರಾತ್ರಿ 7-8 ಗಂಟೆಯ ಮೇಲೆ ಈ ಕರಾವಳಿ ಭಾಗ ಸ್ಥಬ್ಧವಾಗುತ್ತದೆ. ಯಾವುದೇ ಕಾರ್ಯಚಟುವಟಿಕೆ ಇರುವುದಿಲ್ಲ. ಧಾರ್ಮಿಕವಾದ ಭಜನೆ, ಬಯಲಾಟ ಹೊರತಾಗಿ ಬೇರೆ ಯಾವುದೇ ಚಟುವಟಿಕೆ ಇರುವುದಿಲ್ಲ. ಈ ವಿಚಾರವಾಗಿ ಅಲ್ಲಿನ ಶಾಸಕರೇ ಕೂತು ಚರ್ಚೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಬೇಕು. ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಮಕ್ಕಳು ಶಾಲಾ ಕಾಲೇಜುಗಳಿಗೆ ಸೇರ್ಪಡೆಯಾಗುವ ಪ್ರಮಾಣವೂ ಕುಸಿಯುತ್ತಿದೆ. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ನಡೆಸುವವರು ಈ ವಿಚಾರವಾಗಿ ನಮ್ಮ ಬಳಿ ಚರ್ಚೆ ಮಾಡುತ್ತಿದ್ದಾರೆ” ಎಂದರು.

ಈ ಮಧ್ಯೆ ರಾತ್ರಿ 8ರ ನಂತರ ಏನು ಮಾಡಬೇಕು ಎಂದು ನೀವೇ ಸಲಹೆ ನೀಡಿ ಶಾಸಕ ಅರವಿಂದ್ ಬೆಲ್ಲದ್ ಅವರು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ರಾತ್ರಿ 7-8 ಗಂಟೆ ನಂತರ ಮಂಗಳೂರು ಸ್ಥಬ್ಧವಾಗಿದೆ ಎಂದರೆ ಮಂಗಳೂರಿನ ಜನ ಹೆಚ್ಚಾಗಿ ಮನೆಯಿಂದಾಚೆ ಬರುವುದಿಲ್ಲ. ಹೀಗಾದರೆ ಯಾವ ಆರ್ಥಿಕ ವಹಿವಾಟು ನಡೆಯುತ್ತದೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಕರಾವಳಿ ಭಾಗದಲ್ಲಿ ಐಟಿ ಬಿಟಿ ಸ್ಥಾಪಿಸಲು ಪ್ರಸ್ತಾವನೆ ನೀಡಿತು. ಆದರೆ ಅಲ್ಲಿ ಒಂದೇ ಒಂದು ಕಾಂಪ್ಲೆಕ್ಸ್ ಕೂಡ ಇರಲಿಲ್ಲ. ಈಗ ಮೂರೋ, ನಾಲ್ಕೋ ತಲೆ ಎತ್ತುತ್ತಿವೆ. ರಾಜ್ಯದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಇರುವುದೆಲ್ಲ ಅಲ್ಲೇ. ಅಲ್ಲಿರುವ ಪ್ರತಿಭೆಗಳೆಲ್ಲವೂ ಬೆಂಗಳೂರು, ಮುಂಬೈ ಹಾಗೂ ಹೊರದೇಶಗಳಿಗೆ ಹೋಗುತ್ತಿದ್ದಾರೆ. ಯಾಕೆ ಈ ಪರಿಸ್ಥಿತಿ ಇದೆ? ಯಾವುದೇ ನಗರದಲ್ಲಿ ಮನರಂಜನೆಗೆ ಅವಕಾಶವಿಲ್ಲದಿದ್ದರೆ ಅಲ್ಲಿ ಯುವಕರು ಆಸಕ್ತಿ ತೋರುವುದಿಲ್ಲ. ಹೀಗಾಗಿ ಅಲ್ಲಿನ ಶಾಸಕರು ಕೂತು ಚರ್ಚೆ ಮಾಡಿ. ಈ ವಿಚಾರವಾಗಿ ನಾನು ಹಾಗೂ ಪ್ರವಾಸೋದ್ಯಮ ಸಚಿವರಿಬ್ಬರೂ ಸೇರಿ ಜಿಲ್ಲೆಯ ಎಲ್ಲಾ ಶಾಸಕರ ಜತೆ ಪ್ರತ್ಯೇಕವಾಗಿ ಸಭೆ ಮಾಡುತ್ತೇವೆ” ಎಂದು ತಿಳಿಸಿದರು.

ಅರಗ ಅವರು ಗೃಹ ಸಚಿವರಾಗಿದ್ದಾಗ ಎಷ್ಟು ಅಕ್ರಮ ಮದ್ಯದಂಗಡಿ ಬಂದ್ ಮಾಡಿಸಿದ್ದರು:

ಕಾಂಗ್ರೆಸ್ ಶಾಸಕ ಕೌಜಲಗಿ ಮಾಹಂತೇಶ್ ಅವರು ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ಇವುಗಳನ್ನು ತಡೆಹಿಡಿಯುವ ಕಾರ್ಯದ ಬಗ್ಗೆ ಪ್ರಶ್ನೆ ಎತ್ತಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅವರು ಹಳ್ಳಿಗಳಲ್ಲಿ ಎಸ್ ಸಿ, ಎಸ್ ಟಿ ಕಾಲೋನಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ವಿಚಾರ ಪ್ರಸ್ತಾಪಿಸಿದಾಗ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಅರಗ ಜ್ಞಾನೇಂದ್ರ ಅವರು ತಮ್ಮ ಕ್ಷೇತ್ರದ ಸಮಸ್ಯೆಯನ್ನು ಹೇಳುತ್ತಿದ್ದಾರೆ. ರಾಜ್ಯಪಾಲರ ಮೇಲಿನ ಭಾಷಣದ ಬಗ್ಗೆ ಚರ್ಚೆ ವೇಳೆ ಈ ವಿಚಾರವನ್ನೂ ಚರ್ಚೆ ಮಾಡಲಿ. ಅವರು ಕೂಡ ರಾಜ್ಯದ ಗೃಹಮಂತ್ರಿಯಾಗಿದ್ದವರು, ಅವರ ಕಾಲದಲ್ಲಿ ಇಂತಹ ಎಷ್ಟು ಅಂಗಡಿಗಳನ್ನು ಮುಚ್ಚಿಸಿದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಲಿ” ಎಂದು ಹೇಳಿದರು.

ಮೊದಲು ಚಿಕ್ಕಬಳ್ಳಾಪುರ, ಕೋಲಾರಕ್ಕೆ ಕುಡಿಯುವ ನೀರು ಪೂರೈಕೆ

ಎತ್ತಿನಹೊಳೆ ಯೋಜನೆ ಸಂಬಂಧ ಕೋಲಾರ ಜಿಲ್ಲೆ ಕಾಮಗಾರಿ ಸಂಬಂಧ ಹೆಚ್ಚಿನ ಅನುದಾನ ನೀಡಿ ಆದಷ್ಟು ಬೇಗ ಯೋಜನೆ ಪೂರ್ಣಗೊಳಿಸಬೇಕು. ಜತೆಗೆ ಕೆರೆ ತುಂಬಿಸುವ ಯೋಜನೆಗಳನ್ನು ಮುಂದಕ್ಕೆ ಹಾಕಿ, ನಮಗೆ ಮೊದಲು ನೀರು ಕೊಡಬೇಕು ಎಂದು ಜೆಡಿಎಸ್ ಶಾಸಕ ವೆಂಕಟ ಶಿವಾರೆಡ್ಡಿ ಅವರು ಕೇಳಿದ ಪ್ರಶ್ನೆಗೆ, ಶಿವಕುಮಾರ್ ಅವರು ಉತ್ತರಿಸಿದರು.

“ವೆಂಕಟ ಶಿವಾರೆಡ್ಡಿ ಅವರು ಇದೇ ಮೊದಲ ಬಾರಿಗೆ ಸದನದಲ್ಲಿ ಪ್ರಶ್ನೆ ಕೇಳಿ, ಮಾತನಾಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು. ನಮ್ಮ ಸ್ನೇಹಿತರು ಅರ್ಥಪೂರ್ಣವಾದ ಪ್ರಶ್ನೆ ಕೇಳಿದ್ದು, ಈ ಯೋಜನೆಯಲ್ಲಿ 24 ಟಿಎಂಸಿ ನೀರಿನ ಪೈಕಿ ಮೊದಲು 18 ಟಿಎಂಸಿ ನೀರು ಕುಡಿಯಲು ಬರಲಿದೆ ಎಂಬ ಲೆಕ್ಕಚಾರವಿದೆ. ಇದರಲ್ಲಿ 14 ಟಿಎಂಸಿ ಕುಡಿಯು ನೀರಿಗೆ ಕೊಡಲೇ ಬೇಕು. ನಾವು ನಿರಂತರ ಪ್ರಯತ್ನದಿಂದ ಎತ್ತಿನಹೊಳೆಯಿಂದ ನೀರನ್ನು ಎತ್ತಿ ವಾಣಿವಿಲಾಸ ಸಾಗರದ ಕಡೆಗೆ ಹರಿಸಿದ್ದೇವೆ. ಅರಣ್ಯ ಇಲಾಖೆ ಸಮಸ್ಯೆ ಬಗೆಹರಿಸಲು 7ರಂದು ಸಭೆ ಕರೆದಿದ್ದೇನೆ. ಈ ಕೆಲಸ ಆದರೆ ಈ ವರ್ಷದ ಕೊನೆಗೆ ತುಮಕೂರಿನವರೆಗೂ ನೀರು ಹರಿಯಲಿದೆ. ಅರಸೀಕೆರೆ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಮಧುಗಿರಿ ಭಾಗದ ಕೆರೆ ತುಂಬಿಸಿದರೆ ನಿಮಗೆ ನೀರು ಸಿಗುವುದಿಲ್ಲ ಎಂಬ ಆತಂಕ ನಿಮ್ಮಲ್ಲಿದೆ. ನಮ್ಮ ಮುಖ್ಯಮಂತ್ರಿಗಳು ನಮಗೆ ನಿರ್ದೇಶನ ನೀಡಿದ್ದು, ಮೊದಲು ಚಿಕ್ಕಬಳ್ಳಾಪುರ ಹಾಗೂ ಕೋಲಾರಕ್ಕೆ ಮೊದಲು ಕುಡಿಯುವ ನೀರನ್ನು ಪೂರೈಸಿ ನಂತರ ಈ ಕೆರೆಗಳನ್ನು ತುಂಬಿಸುವ ಕಾಮಗಾರಿ ಕೈಗೊತ್ತಿಕೊಳ್ಳಲಾಗುವುದು. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದರು.

ಚಾಮರಾಜನಗರ ಭಾಗದ ಕಾಲುವೆಗಳಲ್ಲಿ ಹೂಳೆತ್ತಲು ಕ್ರಮ

ನಮ್ಮಲ್ಲಿ 2 ಅಣೆಕಟ್ಟುಗಳಿದ್ದು, ಎರಡೂ ಕೂಡ ಭರ್ತಿಯಾಗುತ್ತವೆ. ನಮ್ಮ ಭಾಗದಲ್ಲಿ ಕಾಲುವೆಗಳ ಹೂಳೆತ್ತದ ಕಾರಣಕ್ಕೆ ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಹೀಗಾಗಿ ಹೆಚ್ಚಿನ ಅನುದಾನ ನೀಡಿ ಹೂಳೆತ್ತಿಸಬೇಕು ಎಂದು ಶಾಸಕ ಶಾಸಕ ಪುಟ್ಟರಂಗಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು, “ಕೇವಲ ಪುಟ್ಟರಂಗ ಶೆಟ್ಟಿ ಅವರ ಕ್ಷೇತ್ರ ಮಾತ್ರವಲ್ಲ, ಚಾಮರಾಜನಗರ ಜಿಲ್ಲೆ ನಂಜನಗೂಡು, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ಶಾಸಕರ ಜತೆ ಸಭೆ ಮಾಡಿದ್ದೇನೆ. ಈ ವಿಚಾರವಾಗಿ ಗಮನ ಹರಿಸುತ್ತೇನೆ. ಕಳೆದ ವರ್ಷ ಅನುದಾನ ನೀಡಲು ಆಗಿರಲಿಲ್ಲ. ಈ ಬಾರಿ ಈ ಐದು ಕ್ಷೇತ್ರಗಳಿಗೂ ಅನುದಾನ ನೀಡಲು ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿದ್ದೇವೆ” ಎಂದು ಭರವಸೆ ನೀಡಿದರು.

ಹಿರೆಕೇರೂರು ಕ್ಷೇತ್ರದ ಶಾಸಕ ಯು.ಬಿ ಬಣಕಾರ್ ಅವರು, ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಜಾಕ್ ವೆಲ್ ನಿರ್ವಹಣೆಗೆ 3-4 ಕೋಟಿ ಮೊತ್ತದ ರಸ್ತೆ ಕಾಮಗಾರಿಯನ್ನು ಮಾಡಿಸಿಕೊಡಬೇಕು ಎಂದು ಕೇಳಿದ ಪ್ರಶ್ನೆಗೆ, “ನಮ್ಮ ಸರ್ಕಾರ ಬಂದ ನಂತರ ನೀರಾವರಿ ಇಲಾಖೆಯಲ್ಲಿ ರಸ್ತೆ ನಿರ್ಮಾಣ ಮಾಡುವುದು ಬೇಡ ಎಂದು ತೀರ್ಮಾನಕ್ಕೆ ಬಂದಿದ್ದೇವೆ. ಈ ಬಗ್ಗೆ ನಾನು ವರದಿ ತರಿಸಿಕೊಂಡಿದ್ದು, ಜಾಕ್ ವೆಲ್ ಗೆ ಹೋಗಲು ರಸ್ತೆ ಹದಗೆಟ್ಟಿದ್ದು, ಈ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು” ಎಂದು ತಿಳಿಸಿದರು.

ಜೆಡಿಎಸ್ ಶಾಸಕರಾದ ಹೆಚ್.ಡಿ ರೇವಣ್ಣ ಅವರು ತಮ್ಮ ಕ್ಷೇತ್ರದಲ್ಲಿ 450 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ 548 ಕ್ಯೂಸೆಕ್ ನೀರು ಬೇಕಾಗಿದ್ದು, ನೀರು ಸರಿಯಾಗಿ ಹೋಗುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಜಲಸಂಪನ್ಮೂಲ ಸಚಿವರೂ ಆದ ಶಿವಕುಮಾರ್ ಅವರು ಉತ್ತರಿಸಿದರು. “ಈ ಯೋಜನೆ ಮಾಡಿ 25-30 ವರ್ಷವಾಗಿದ್ದು, 4.50 ಕಿ.ಮೀ ಉದ್ದದಷ್ಟು ನಾಲೆ ತನ್ನ ಆಕಾರ ಕಳೆದುಕೊಂಡಿದೆ. ಈ ವಿಚಾರವಾಗಿ ನಾವು ಮುಂದಿನ ದಿನಗಳಲ್ಲಿ ಸರಿಪಡಿಸುವ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.


Spread the love

About Laxminews 24x7

Check Also

ಕೃಷಿಕರ ನಗರ ಪ್ರದೇಶದ ವಲಸೆಯಿಂದ ಕೃಷಿಗೆ ಪೆಟ್ಟು: ಸಿ.ಎಂ ಸಿದ್ದರಾಮಯ್ಯ*

Spread the love ಕೃಷಿಕರ ನಗರ ಪ್ರದೇಶದ ವಲಸೆಯಿಂದ ಕೃಷಿಗೆ ಪೆಟ್ಟು: ಸಿ.ಎಂ ಸಿದ್ದರಾಮಯ್ಯ* *ಒಣ ಬೇಸಾಯ‌ ಮಾಡುವ ರೈತರೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ