ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಇದೇ ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದ ಬಜೆಟ್ ಇತಿಹಾಸ 21 ಕೋಟಿ ರೂ. ನಿಂದ ಆರಂಭವಾಗಿ ಇದೀಗ 3.71 ಲಕ್ಷ ಕೋಟಿ ರೂ.ಗೆ ತಲುಪಿದೆ. ರಾಜ್ಯ ಬಜೆಟ್ ಮೈಲಿಗಲ್ಲುಗಳ ವಿಶೇಷ ವರದಿ ಇಲ್ಲಿದೆ.
ಕರ್ನಾಟಕ ದೇಶದ ಮಂಚೂಣಿಯಲ್ಲಿನ ಪ್ರಗತಿಶೀಲ ರಾಜ್ಯ. ಆರ್ಥಿಕವಾಗಿ ಸದೃಢವಾಗುವ ಮೂಲಕ ಕರ್ನಾಟಕ ದೇಶದ ಅಭಿವೃದ್ಧಿಶೀಲ ರಾಜ್ಯಗಳಲ್ಲಿ ಅಗ್ರಗಣ್ಯವಾಗಿದೆ. ರಾಜ್ಯ ಪ್ರಸ್ತುತ 28 ಲಕ್ಷ ಕೋಟಿ ರೂ. ಜಿಡಿಪಿ ಹೊಂದಿದೆ. ರಾಜ್ಯದ ಬಜೆಟ್ ಗಾತ್ರ ವರ್ಷಂಪ್ರತಿ ಏರುಮುಖವಾಗಿಯೇ ಮುನ್ನುಗ್ಗುತ್ತಿದೆ. ಆರ್ಥಿಕ ಚಟುವಟಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿರುವುದರಿಂದ ರಾಜ್ಯದ ಆಯವ್ಯಯದ ಗಾತ್ರವೂ ಬೃಹದಾಕಾರವಾಗಿ ಬೆಳೆಯುತ್ತಿದೆ. ಬಜೆಟ್ ಗಾತ್ರವು ರಾಜ್ಯದ ಆರ್ಥಿಕತೆಯ ಪ್ರಮಾಣ, ಅಭಿವೃದ್ಧಿಶೀಲತೆ, ಆರ್ಥಿಕ ಚಟುವಟಿಕೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
21 ಕೋಟಿಯಿಂದ 3.71 ಲಕ್ಷ ಕೋಟಿ ರೂ.ಗೆ ಹಿಗ್ಗಿದ ಬಜೆಟ್ ಗಾತ್ರ : ರಾಜ್ಯದ ಬಜೆಟ್ ಗಾತ್ರ ಆರಂಭದಲ್ಲಿ ಇದ್ದಿದ್ದು ಕೇವಲ 21 ಕೋಟಿ ರೂಪಾಯಿ. 21 ಕೋಟಿ ರೂ. ರಾಜ್ಯದ ಮೊದಲ ಬಜೆಟ್ ಗಾತ್ರವಾಗಿತ್ತು. ಅದೇ ಗಾತ್ರದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ, ಆರ್ಥಿಕ ಚಟುವಟಿಕೆ ಇತ್ತು. ಬಳಿಕ ವರ್ಷಂಪ್ರತಿ ರಾಜ್ಯದ ಬಜೆಟ್ ಗಾತ್ರ ಹಿಗ್ಗುತ್ತಾ ಹೋಯಿತು. 21 ಕೋಟಿ ರೂ. ನಿಂದ ಪ್ರಾರಂಭವಾದ ರಾಜ್ಯದ ಬಜೆಟ್ ಯಾತ್ರೆ ಈಗ 3.71 ಲಕ್ಷ ಕೋಟಿ ರೂ.ಗೆ ಹೋಗಿ ತಲುಪಿದೆ.
ಕರ್ನಾಟಕ ಏಕೀಕರಣದ ಬಳಿಕ 1952-53ರಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ರಾಜ್ಯದ ಮೊದಲ ಮುಂಗಡ ಪತ್ರವನ್ನು ಮಂಡಿಸಿದ್ದರು. ಕೆಂಗಲ್ ಅವರು ಮಂಡಿಸಿದ್ದ ಮೊದಲ ಬಜೆಟ್ ಗಾತ್ರ 21.03 ಕೋಟಿ ರೂ. ಆಗಿನ ಆರ್ಥಿಕತೆಯ ಇತಿಮಿತಿಯೊಳಗೆ ಕೆಂಗಲ್ ಹನುಮಂತಯ್ಯ ಅವರು ಒಟ್ಟು 4 ಬಜೆಟ್ ಮಂಡಿಸಿದ್ದರು. ಕೆಂಗಲ್ ಅವರ ಕಡೆಯ ಆಯವ್ಯಯದ ಗಾತ್ರ 30 ಕೋಟಿ ರೂ. ಆಗಿತ್ತು. ಕೆಂಗಲ್ ಬಳಿಕ ವಿತ್ತ ಸಚಿವರಾದ ಟಿ. ಮರಿಯಪ್ಪ 1957-58ರಲ್ಲಿ ಬಜೆಟ್ ಮಂಡಿಸಿದರು. ಆ ವೇಳೆಗೆ ಬಜೆಟ್ ಗಾತ್ರ 60.28 ಕೋಟಿ ರೂ.ಗೆ ಏರಿಕೆಯಾಗಿತ್ತು. ಆದರೆ, ಮರು ವರ್ಷ 1958-59ರಂದು ಮಂಡಿಸಿದ್ದ ಆಯ-ವ್ಯಯದ ಗಾತ್ರ 50.82 ಕೋಟಿ ರೂ.ಗೆ ಕುಗ್ಗಿತ್ತು.