ಹಾವೇರಿ: ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ವಂಚಿಸುತ್ತಿದ್ದ ಆರೋಪದಲ್ಲಿ ಓರ್ವನನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಚಂದ್ರಪ್ಪ ಶಿವಪ್ಪ ತೋಟದ ಬಂಧಿತ ಆರೋಪಿ.
ಹೆಚ್ಚು ಲಾಭ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಹಾಕಿಸಿಕೊಂಡು ಚಂದ್ರಪ್ಪ ಮೋಸ ಮಾಡುತ್ತಿದ್ದ ಎಂದು ಹಾವೇರಿ ನಗರದ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಾನಗಲ್ ತಾಲೂಕಿನ ಶೀಗಿಹಳ್ಳಿ ಗ್ರಾಮದ ಮನೋಜ ಹಾದಿಮನಿ ಎಂಬವರು ದೂರು ನೀಡಿದ್ದರು.
ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಪ್ರತಿದಿನ ಶೇ.2ಕ್ಕಿಂತ ಹೆಚ್ಚಿನ ಲಾಭ ಕೊಡುತ್ತೇನೆ ಎಂದು ಆರೋಪಿ ನಂಬಿಸಿದ್ದ. ನಂತರ ತನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ 5 ಲಕ್ಷ 83 ಸಾವಿರದ 500 ರುಪಾಯಿ ಹಣ ಹಾಕಿಸಿಕೊಂಡು ನಾಪತ್ತೆಯಾಗಿದ್ದ. ಹೂಡಿಕೆ ಮಾಡಿದ ಹಣ ಮತ್ತು ಲಾಭದ ಹಣವನ್ನೂ ಕೊಡದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಮನೋಜ ಹಾದಿಮನಿ ತಿಳಿಸಿದ್ದರು.
ದೂರಿನ ಆಧಾರದ ಮೇರೆಗೆ ಡಿವೈಎಸ್ಪಿ ಪ್ರಗ್ಯಾ ಆನಂದ ಮಾರ್ಗದರ್ಶನದಲ್ಲಿ ಸಿಪಿಐ ಶಿವಶಂಕರ ಗಣಾಚಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಇಎನ್ ಕ್ರೈಂ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಚಂದ್ರಪ್ಪ ಈ ಹಿಂದೆಯೂ ಹಾವೇರಿ ಜಿಲ್ಲೆಯ ಸಾರ್ವಜನಿಕರಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚಿನ ಹಣ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿ ಜೈಲಿಗೆ ಹೋಗಿದ್ದ. ಬಳಿಕ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದ. ಈಗ ಮತ್ತೆ ವಂಚನೆಯ ಚಾಳಿ ಮುಂದುವರೆಸಿದ್ದಾನೆ. ಧನುಷ್ ಸ್ಟಾಕ್ಸ್ ಇನ್ವಸ್ಟೆಮೆಂಟ್ (ಡಿ ಸ್ಟಾಕ್) ನಕಲಿ ಕಂಪನಿಯ ಹೆಸರಿನಲ್ಲಿ ರಶೀದಿಗಳು, ನಕಲಿ ಠೇವಣಿ ಪತ್ರಗಳನ್ನು ಚಂದ್ರಪ್ಪನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Laxmi News 24×7