ಕಿತ್ತೂರು: ಕಿತ್ತೂರು ಉತ್ಸವ ಈಗ ದ್ವಿಶತಮಾನೋತ್ಸವ ಸಂಭ್ರಮದಲ್ಲಿದೆ. ಆದರೆ, ಕಿತ್ತೂರು ಸಂಸ್ಥಾನದ ನೈಜ ಇತಿಹಾಸದ ಬಗ್ಗೆ ಇಂದಿಗೂ ಸ್ಪಷ್ಟತೆ ಇಲ್ಲ. ಅದರ ಕುರಿತು ಅಧ್ಯಯನ ಕೈಗೊಳ್ಳಲು ಮಹಾರಾಷ್ಟ್ರದ ಮುಂಬೈ ಮತ್ತು ಪುಣೆಯ ಪತ್ರಾಗಾರ ಇಲಾಖೆಯಲ್ಲಿನ ಕೆಲವು ದಾಖಲೆಗಳನ್ನು ತರಲಾಗಿದೆ.
ಆದರೆ, ಇನ್ನೂ ಅಧಿಕ ಪ್ರಮಾಣದಲ್ಲಿ ಅಲ್ಲಿರುವ ದಾಖಲೆಗಳನ್ನು ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.
‘ಪ್ರತಿವರ್ಷ ಉತ್ಸವ ಬಂದಾಗ, ಈ ವಿಷಯ ಮುನ್ನೆಲೆಗೆ ಬರುತ್ತದೆ. ‘ಲಂಡನ್ ಮತ್ತು ಮಹಾರಾಷ್ಟ್ರದಲ್ಲಿನ ದಾಖಲೆಗಳನ್ನು ತಂದು, ಸಂಶೋಧನೆಗೆ ಪ್ರಯತ್ನಿಸುತ್ತೇವೆ’ ಎಂದು ಜನಪ್ರತಿನಿಧಿಗಳು ಭರವಸೆ ಕೊಡುತ್ತಾರೆ. ಮತ್ತೆ ಆ ವಿಚಾರದ ಬಗ್ಗೆ ಅವರು ಮಾತನಾಡುವುದು ಮುಂದಿನ ಉತ್ಸವದಲ್ಲೇ’ ಎಂಬುದು ಜನರ ದೂರು.
ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ, ಇಂಥ ದಾಖಲೆಗಳ ಕ್ರೋಢೀಕರಣಕ್ಕಾಗಿ ಸಂಶೋಧಕ ಎಂ.ಎಂ.ಕಲಬುರ್ಗಿ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ತಿಳಿಸಿದ್ದರು. ಆದರೆ, ನಂತರ ಅದು ಕಾರ್ಯರೂಪಕ್ಕೆ ಬರಲಿಲ್ಲ.
ಯಾವ್ಯಾವ ದಾಖಲೆಗಳಿವೆ?: ‘ಪುಣೆಯ ಪತ್ರಾಗಾರ ಇಲಾಖೆಯಲ್ಲಿ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿ, ಪರ್ಷಿಯನ್, ಇಂಗ್ಲಿಷ್, ಮೋಡಿ ಮತ್ತು ಮರಾಠಿ ಲಿಪಿಯಲ್ಲಿ ದಾಖಲೆಗಳಿವೆ. ಲಂಡನ್‌ನಲ್ಲಿ ಕಿತ್ತೂರು ಅರಮನೆಯ ಚಿತ್ರ, ಚನ್ನಮ್ಮ ಬಳಸುತ್ತಿದ್ದ ಖಡ್ಗ, ಕತ್ತಿ, ಭರ್ಚಿ ಮತ್ತು ಸಿಂಹಾಸನದ ಒಂದು ಭಾಗ ಇದೆ ಎನ್ನುವ ಮಾಹಿತಿಯೂ ಇದೆ. ಅವುಗಳನ್ನು ನಮ್ಮ ನಾಡಿಗೆ ತರುವ ಕೆಲಸವಾಗಬೇಕಿದೆ’ ಎಂದು ಸಂಶೋಧಕ ಸಂತೋಷ ಹಾನಗಲ್ಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬ್ರಿಟಿಷರ ವಿರುದ್ಧ ಚನ್ನಮ್ಮ ತನ್ನ ಸೈನ್ಯದೊಂದಿಗೆ ಹೋರಾಡಿ ವಿಜಯಸಾಧಿಸಿದ ಘಳಿಗೆಗೆ 200 ವರ್ಷ ಪೂರ್ಣಗೊಳ್ಳುತ್ತಿದೆ. ಆದರೆ, ಕಿತ್ತೂರಿನ ನೈಜ ಇತಿಹಾಸವೇ ಬೆಳಕಿಗೆ ಬಂದಿಲ್ಲ. ಜನರಿಗೆ ನಿಜವಾದ ಇತಿಹಾಸ ತಿಳಿಸಬೇಕಾದರೆ, ಲಂಡನ್, ಮಹಾರಾಷ್ಟ್ರ ಮಾತ್ರವಲ್ಲ; ದೇಶದ ವಿವಿಧೆಡೆ ಪತ್ರಾಗಾರ ಇಲಾಖೆಯಲ್ಲಿರುವ ಮಹತ್ವದ ದಾಖಲೆಗಳನ್ನು ಕರ್ನಾಟಕಕ್ಕೆ ತರಬೇಕಿದೆ’ ಎಂದು ಚಿಕ್ಕನಂದಿಹಳ್ಳಿ ಚಂದ್ರಗೌಡ ಪಾಟೀಲ ಹೇಳಿದರು.
‘ಕಿತ್ತೂರು ಸಂಸ್ಥಾನ ದಾಖಲೆಗಳು’ ಎಂಬ ಸಂಪುಟದಲ್ಲಿ ಮುದ್ರಿಸಿರುವ ಕಿತ್ತೂರಿನಲ್ಲಿ ಬಂಧಿಸಿದ ಕೈದಿಗಳ ಕುರಿತ ಹಾಗೂ ಕಿತ್ತೂರು ಪರ ವಕೀಲ ರಾಚಪ್ಪನು ಎಲ್ಫಿನ್‌ಸ್ಟನ್ ಅವರಿಗೆ ಬರೆದ ಪತ್ರಕಿತ್ತೂರಿನ ಸಮಗ್ರ ಇತಿಹಾಸ ಅರಿಯಲು ಲಂಡನ್ ಮ್ಯೂಸಿಯಂ ಪುಣೆ ಮತ್ತು ಮುಂಬೈನ ಪತ್ರಾಗಾರ ಇಲಾಖೆಗಳಲ್ಲಿನ ಎಲ್ಲ ದಾಖಲೆ ತಂದು ಅಧ್ಯಯನ ಕೈಗೊಳ್ಳಬೇಕು
-ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ರಾಜಗುರು ಸಂಸ್ಥಾನ ಕಲ್ಮಠ ಚನ್ನಮ್ಮನ ಕಿತ್ತೂರು