ಕಿತ್ತೂರು: ‘ನಾಡಿನ ಸ್ವಾತಂತ್ರ್ಯಕ್ಕಾಗಿ ದೈತ್ಯ ಬ್ರಿಟಿಷ್ ಸೈನ್ಯದ ವಿರುದ್ಧ ಪ್ರಥಮ ಹೋರಾಟದ ಕಿಡಿ ಹೊತ್ತಿಸಿದ್ದು ರಾಣಿ ಚನ್ನಮ್ಮ. ಇದು ಚನ್ನಮ್ಮನ ನಿಧನದ ನಂತರವೂ ನಿರಂತರವಾಗಿತ್ತು. ರಾಣಿಯ ನಂತರದ ಹೋರಾಟದ ವಾರಸುದಾರಿಕೆ ಪಡೆದುಕೊಂಡಿದ್ದವರ ಸ್ಮರಣೆಯೇ ರೋಮಾಂಚನ ಉಂಟು ಮಾಡುವಂಥದ್ದು’ ಎನ್ನುತ್ತಾರೆ ಸ್ವಾತಂತ್ರ್ಯ ಹೋರಾಟಗಾರ ಮನೆತನದ ಪ್ರಭು ಮಾರಿಹಾಳ.
‘ಕ್ರಾಂತಿಯ ನೆಲ ಕಿತ್ತೂರು ಮಣ್ಣಿನ ತೇಜಸ್ಸು ಅಂಥದ್ದು. ರಾಣಿ ಚನ್ನಮ್ಮನ ನಂತರ ಹೋರಾಟದ ನೊಗ ಹೊತ್ತು ಸಾಗಿದವರು ಸಂಗೊಳ್ಳಿ ರಾಯಣ್ಣ ಮತ್ತು ಅವರ ಹತ್ತಾರು ಸಹಚರರು. ರಾಯಣ್ಣನನ್ನು ಬಂಧಿಸಿ ನಂದಗಡದಲ್ಲಿ ನೇಣು ಹಾಕಿದ ನಂತರ ಈ ನಾಡಿನಲ್ಲಿ ಹೋರಾಟದ ಕಾವು ತಣ್ಣಗಾಯಿತು ಎಂದು ಬ್ರಿಟಿಷರು ಭಾವಿಸಿದ್ದರು. ಆದರೆ, ಹಾಗಾಗಲಿಲ್ಲ. ಸ್ವಾತಂತ್ರ್ಯ ಸಿಗುವವರೆಗೂ ಇಲ್ಲಿಯ ವೀರ ಪರಂಪರೆಯ ಸೇನಾನಿಗಳು ಹೋರಾಟದ ಜ್ಯೋತಿ ನಂದಿಸಲು ಬಿಟ್ಟಿರಲಿಲ್ಲ’ ಎಂದು ಅವರು ಹೇಳಿದರು.
ವಾರ್ ಕೌನ್ಸಿಲ್ ರಚನೆ
ಐತಿಹಾಸಿಕ ಕಿತ್ತೂರು ನೆಲದಲ್ಲಿ 1930ರಲ್ಲಿ ನೇಮಿನಾಥ ಮುನವಳ್ಳಿ ನೇತೃತ್ವದಲ್ಲಿ ‘ವಾರ್ ಕೌನ್ಸಿಲ್’ ಸಂಘಟನೆ ಸ್ಥಾಪಿಸಲಾಗಿತ್ತು. ಸಂಘಟನೆಯಲ್ಲಿದ್ದ ರಾಮಚಂದ್ರ ನಾಯ್ಕ, ವೀರಭದ್ರಪ್ಪ(ಅಜ್ಜಪ್ಪ) ಮಾರಿಹಾಳ, ಹನುಮಂತಾಚಾರ್ಯ ಮಿಟ್ಟಿಮನಿ, ರಂಗನಾಥ ಮೊಸಳಿ, ಸಂಗನಬಸಪ್ಪ ಶರಣ್ಣವರ, ನರಸಿಂಹಚಾರ್ಯ ಭಾರದ್ವಾಜ, ಹನುಮಂತಾಚಾರ್ಯ ಕಟ್ಟಿ, ಭಾವುರಾವ್ ಪಾಗಾದ, ಚಂದ್ರಯ್ಯ ವಸ್ತ್ರದ, ನೇಮಿನಾಥ ಇಂಗಳೆ, ಶಂಕರ ಪದಕಿ, ದೊಂಡಿಭಾ ಪದಕಿ, ಭೀಮಪ್ಪ ಯಲಿಗಾರ, ಗುರುಸಿದ್ಧಯ್ಯ ತಿಮ್ಮಾಪುರ, ನಾನಾಸಾಬ್ ಸರದಾರ, ಚನ್ನಯ್ಯ ವಿಭೂತಿ, ನಿಂಗಪ್ಪ ಕಲ್ಮಠ, ಬೈಲಪ್ಪ ಬಳಿಗಾರ, ನಾಗಪ್ಪ ಹಣಗಿ, ಕಲ್ಲಪ್ಪ ಹಣಗಿ, ಶಂಕ್ರೆಪ್ಪ ಮೋರಕರ, ರುದ್ರಪ್ಪ ಹೊಂಗಲ, ಜೋತೆಪ್ಪ ಸರ್ವದೆ, ಗುರುನಾಥ ಪತ್ತಾರ, ಹುಸೇನಸಾಬ್ ಅರಬ್, ಇಮಾಮಸಾಬ್ ಬಸಾಪುರ, ಗೌಸುಸಾಬ್ ಹೊಂಗಲ, ಹುಸೇನಸಾಬ್ ಬೇಪಾರಿ, ಶೆಟ್ಟೆಪ್ಪ ವಡ್ಡರ, ತಿಮ್ಮಪ್ಪ ವಡ್ಡರ ಸೇರಿ ಅನೇಕ ಹೋರಾಟಗಾರರು ಇದರಲ್ಲಿದ್ದರು