ಶಿರಹಟ್ಟಿ: ಕಟ್ಟಡ ನಿರ್ಮಾಣ ಹಾಗೂ ವಿವಿಧ ಬಗೆಯ ನಿರ್ಮಾಣ ಕಾಮಗಾರಿಗಳು ಹೆಚ್ಚಾದಂತೆ ಮರಳು, ಕಲ್ಲಿನ ಬೇಡಿಕೆಯೂ ಹೆಚ್ಚುತ್ತದೆ. ಮರಳು ಸಂಗ್ರಹಕ್ಕಾಗಿ ನಿರ್ದಿಷ್ಟ ಸ್ಥಳಗಳಿರುತ್ತವೆ. ಸುಮ್ಮನೆ ನದಿ, ಕೆರೆ ಭಾಗಗಳಿಂದ ಎಲ್ಲೆಂದರಲ್ಲಿ ಮರಳು ಎತ್ತುವಂತಿಲ್ಲ. ಅದರೆ, ತಾಲ್ಲೂಕಿನಲ್ಲಿ ನಿಯಮಗಳನ್ನು ಮೀರುವುದು ದುಷ್ಟರಿಗೆ ಚಿಟಿಕೆ ಹೊಡೆದಷ್ಟೇ ಸುಲಭವಾಗಿದ್ದು, ಅಕ್ರಮ ಮರಳು ದಂಧೆಯನ್ನು ಅವ್ಯಾಹತವಾಗಿ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರೂ ಪ್ರಾಕೃತಿಕ ಸಂಪತ್ತು ಹೇರಳವಾಗಿರುವ ತಾಲ್ಲೂಕಿನ ಮೇಲೆಯೇ ಬಂಡವಾಳಶಾಹಿಗಳ ಕಣ್ಣುಬಿದ್ದಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ; ಅಧಿಕಾರಿಗಳ ನೆರಳಲ್ಲಿ ನಿತ್ಯ ಮರಳು ಸಾಗಿಸುತ್ತಿದ್ದು, ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ ಎಂದು ಪರಿಸರವಾದಿಗಳು ಆರೋಪ ಮಾಡಿದ್ದಾರೆ.
ಅತಿ ಹೆಚ್ವು ಪಾಯಿಂಟ್: ಗದಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮರಳಿನ ಪಾಯಿಂಟ್‌ಗಳು ಇರುವುದು ಶಿರಹಟ್ಟಿ ತಾಲ್ಲೂಕಿನಲ್ಲಿ. ಇಟಗಿ, ತೊಳಗಿ, ಸಾಸಲವಾಡ, ಗೋವನಕೊಪ್ಪ, ಅಂಕಲಿ, ಬೂದಿಹಾಳ, ಬಸಾಪುರ, ನಾಗರಮಡವು ಗ್ರಾಮದ ಸರ್ಕಾರಿ ಹಾಗೂ ಪಟ್ಟಾ ಭೂಮಿಯಲ್ಲಿ ಒಟ್ಟು 16 ಮರಳು ಗುತ್ತಿಗೆದಾರರಿಗೆ ಪರವಾನಗಿ ನೀಡಲಾಗಿದೆ. ಇದರಲ್ಲಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ 10 ಸಂಸ್ಥೆಯ ಪರವಾನಗಿ ಮುಗಿದಿದ್ದು, 6 ಚಾಲ್ತಿಯಲ್ಲಿವೆ. ಇದು ಕೇವಲ ಹೆಸರಿಗೆ ಮಾತ್ರ ಆಗಿದ್ದು, ಇಲ್ಲಿ ಅಕ್ರಮವಾಗಿ ಮರಳು ಅಗೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಾರೆ.
ಇದನ್ನು ಹೊರತುಪಡಿಸಿ ಹಳ್ಳ-ಕೊಳ್ಳ, ನದಿಪಾತ್ರದ ಜಮೀನು ಹಾಗೂ ಹಳ್ಳಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಲೆಕ್ಕವೇ ಇಲ್ಲದಂತಾಗಿದೆ ಎಂದು ಸ್ಥಳೀಯರು ದಂಧೆಯ ವಿಸ್ತಾರ ಮತ್ತು ಸ್ವರೂಪವನ್ನು ಬಿಚ್ಚಿಡುತ್ತಾರೆ.
ಸರ್ಕಾರದ ನಿಯಮ ಉಲ್ಲಂಘನೆ: ಮರಳು ಗುತ್ತಿಗೆ ಪಡೆದ ಒಂದು ಸಂಸ್ಥೆಗೆ 5 ವರ್ಷಗಳ ಅವಧಿಗೆ ಪರವಾನಗಿ ನೀಡಬೇಕಾದರೆ ವರ್ಷಕ್ಕೆ ಇಂತಿಷ್ಟು ಮೆಟ್ರಿಕ್ ಟನ್ ಮರಳು ತೆಗೆಯಬೇಕೆಂಬ ನಿಯಮ ಇರುತ್ತದೆ. ಅಲ್ಲದೇ ಪ್ರತಿ ಪಾಯಿಂಟ್‌ನಿಂದ ಲೋಡ್ ಆಗುವ ಟಿಪ್ಪರ್ ಅಥವಾ ಟ್ರ್ಯಾಕ್ಟರ್‌ಗಳಿಗೆ ಕಡ್ಡಾಯವಾಗಿ ಪರವಾನಗಿಯ ಪಾಸ್ ನೀಡಬೇಕು. ಅದು ಇಂತಿಷ್ಟು ಕಾಲಾವಧಿಗೆ ಮಾತ್ರ ಎಂದಿರುತ್ತದೆ. ತಾಲ್ಲೂಕಿನಲ್ಲಿ ಬಹುತೇಕ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಮರಳು ಮಾರಾಟವನ್ನು ದಂಧೆಯಾಗಿ ಮಾರ್ಪಡಿಸಲಾಗಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಾರೆ.
ಮರಳಿನ ಅಗೆತ ದುಪ್ಪಟ್ಟು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಸರ್ಕಾರ ಒಂದು ಪಾಯಿಂಟ್‌ನಲ್ಲಿ ವರ್ಷಕ್ಕೆ ಇಂತಿಷ್ಟು ಮೆಟ್ರಿಕ್ ಟನ್ ಎಂದು ಮರಳು ತೆಗೆಯಲು ನಿಯಮ ವಿಧಿಸಲಾಗಿದೆ. ಆದರೆ, ಅದನ್ನು ಲೆಕ್ಕಿಸದ ಗುತ್ತಿಗೆದಾರರು ಸಾಕಷ್ಟು ಮರಳು ತೆಗೆಯುವುದಲ್ಲದೆ ಮರಳು ಎತ್ತಲು ತೆಪ್ಪವನ್ನು ಸಹ ಬಳಸುತ್ತಿದ್ದಾರೆ. ಸದ್ಯ ಮಳೆ ಪ್ರಾರಂಭವಾಗಿದ್ದು, ಈಗಾಗಲೇ ಸಾಕಷ್ಟು ಮರಳು ಸಂಗ್ರಹಿಸಿದ್ದಾರೆ. ಅಲ್ಲದೇ ಇನ್ನೂ ಬೇಡಿಕೆ ಹೆಚ್ಚಾದಂತೆಲ್ಲ ನೀರು ಇದ್ದರೂ ತೆಪ್ಪದ ಮೂಲಕ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಮುಂದುವರಿಸಿದ್ದಾರೆ.