Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಕೇಳಿಸದೇ ಕಲ್ಲು ಕಲ್ಲಿನಲಿನ ಕಲ್ಲುಕುಟಿಗರ ಧ್ವನಿ

ಕೇಳಿಸದೇ ಕಲ್ಲು ಕಲ್ಲಿನಲಿನ ಕಲ್ಲುಕುಟಿಗರ ಧ್ವನಿ

Spread the love

ಚಿಕ್ಕೋಡಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಲ್ಲು ಕುಟಿಗರು ಈಗಲೂ ತಮ್ಮ ಕುಲಕಸುಬು ಮಾಡುತ್ತಿದ್ದಾರೆ. ತುತ್ತಿನಚೀಲ ತುಂಬಿಸಿಕೊಳ್ಳಲು ಕಲ್ಲು- ಬಂಡೆಗಳನ್ನೇ ಪುಡಿ ಮಾಡಿ ರೂಪ ನೀಡುತ್ತಿದ್ದಾರೆ.

‌ಮೂರು ತಲೆಮಾರುಗಳಿಂದ ಇದೇ ಕೆಲಸ ಮಾಡುತ್ತಿದ್ದರೂ ಅವರ ಬದುಕು ಮಾತ್ರ ಇನ್ನೂ ಮೂರ್ತರೂಪ ಪಡೆದಿಲ್ಲ.

ಸಂಕಷ್ಟಗಳು ಕಲ್ಲು-ಬಂಡೆಗಳಂತೆಯೇ ದೃಢವಾಗಿ ಉಳಿದುಬಿಟ್ಟಿವೆ.

ಜೈನಾಪುರ ಕ್ರಾಸ್‌ಗೆ ಬಂದರೆ ಸಾಕು; ಒಳಕಲ್ಲು, ಬೀಸುವ ಕಲ್ಲು, ರುಬ್ಬುವ ಕಲ್ಲು, ಚಟ್ನಿ ಕಲ್ಲು, ನಂದಿ, ಲಿಂಗ, ನಾಗಪ್ಪ ಮುಂತಾದ ಮೂರ್ತಿಗಳು ಕಣ್ಣಿಗೆ ಬೀಳುತ್ತವೆ. ಕಲ್ಲು ಕುಟಿಗರು ಇವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿನ ಬಹುಪಾಲು ಜನ ಹೆಚ್ಚಿನ ಶಿಕ್ಷಣ ಪಡೆದಿಲ್ಲ. ಅವರಿಗೆ ಬೇರೆ ಕೆಲಸಗಳೂ ಬರುವುದಿಲ್ಲ. ಹೀಗಾಗಿ, ಕಠಿಣವಾದರೂ ಕುಲಕಸುಬನ್ನೇ ನೆಚ್ಚಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.

ಕಳೆದ 20 ವರ್ಷಗಳ ಹಿಂದೆ ಕಟೆದಿರುವ ಒಳಕಲ್ಲು, ರೊಟ್ಟಿ ಕಲ್ಲು, ರುಬ್ಬುವ ಕಲ್ಲು ಸೇರಿದಂತೆ ವಿವಿಧ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಇದೀಗ ಗ್ರೈಂಡರ್, ಮಿಕ್ಸರ್‌, ಗಿರಣಿಗಳು ಬಂದಿದ್ದರಿಂದ ಕಲ್ಲುಕುಟಿಕರು ತಯಾರಿಸಿರುವ ವಸ್ತುಗಳನ್ನು ಯಾರೂ ಕೇಳುವವರಿಲ್ಲ. ಹಳ್ಳಿಗಳಲ್ಲಿ ಮದುವೆ, ಕಾರ್ಯ, ಹಬ್ಬ, ಹರಿದಿನ, ಜಾತ್ರೆಗಳಲ್ಲಿ ಸಾಂಪ್ರದಾಯಿಕ ಆಚರಣೆಗಳಿಗೆ ಈ ವಸ್ತುಗಳು ಇನ್ನೂ ಬೇಕಾಗಿವೆ. ಇದೇ ಕಾರಣಕ್ಕೆ ಅಲ್ಲಲ್ಲಿ ಮಾರಾಟ ಸಾಧ್ಯವಾಗಿದೆ.

ಚಿಕ್ಕೋಡಿ: ಕೇಳಿಸದೇ ಕಲ್ಲು ಕಲ್ಲಿನಲಿನ ಕಲ್ಲುಕುಟಿಗರ ಧ್ವನಿ

ಹಲವು ವರ್ಷಗಳಿಂದ ಜೈನಾಪುರ ಗ್ರಾಮದ ಬಳಿ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಕಳೆಯುತ್ತಿದ್ದಾರೆ ಈ ಜನ. ಹುಕ್ಕೇರಿ ತಾಲ್ಲೂಕಿನ ಬೋರಗಲ್ಲ ಗ್ರಾಮದ ಗುಡ್ಡದಿಂದ ಕಲ್ಲು ತಂದು ಕಲ್ಲಿನ ವಸ್ತುಗಳನ್ನು ತಯಾರಿಸುತ್ತಾರೆ. ಇಲ್ಲಿಯೇ ಕುಳಿತು ವ್ಯಾಪಾರವನ್ನೂ ಮಾಡುತ್ತಾರೆ. ಇಡೀ ದಿನ ಕಲ್ಲು ಕಟಿದು ವಸ್ತುಗಳನ್ನು ತಯಾರಿಸಿ ವ್ಯಾಪಾರ ಮಾಡಿದರೆ ಖರ್ಚು ಕಳೆದು ತಿಂಗಳಿಗೆ ₹4,000 ದಿಂದ ₹5,000 ಸಾವಿರ ಆದಾಯ ಸಿಗುತ್ತದೆ. ಶ್ರಾವಣ ಮಾಸದಲ್ಲಿ ದೇವರ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿದರೆ ತುಸು ಹೆಚ್ಚು ಹಣ ಸಿಗಬಹುದು.

ರುಬ್ಬುವ ಕಲ್ಲು ₹2,500, ಬೀಸುವ ಕಲ್ಲು ₹1,500, ಒಳಕಲ್ಲು ₹500, ಚಟ್ನಿಕಲ್ಲು ₹ 400ರಂತೆ ಅವುಗಳ ಗಾತ್ರದ ಮೇಲೆ ದರ ನಿಗದಿ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಕಲ್ಲಿನ ವ್ಯಾಪಾರ ನಡೆಯುತ್ತದೆ. ಮಳೆಗಾಲ, ಚಳಿಗಾಲ ಬಂದರೆ ಪಣಜಿ, ಮಡಗಾಂವ, ವಾಸ್ಕೊ ಸೇರಿದಂತೆ ಗೋವಾ ರಾಜ್ಯದ ಹಲವು ಕಡೆಗೆ ತಲೆ ಮೇಲೆ ಹೊತ್ತು ವ್ಯಾಪಾರ ಮಾಡಿಕೊಂಡು ಬರುವುದು ಅವರಿಗೆ ಅನಿವಾರ್ಯವಾಗಿದೆ.

ನಿರ್ಲಕ್ಷ್ಯಕ್ಕೆ ಒಳಗಾದ ಈ ಸಮುದಾಯದ ಜನರಿಗೆ ಇದೂವರೆಗೆ ಯಾರೂ ನೆಲೆ ಕಲ್ಪಿಸಿಲ್ಲ. ಹಲವರಿಗೆ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ಗಳೇ ಇಲ್ಲ. ಕಾಯಂ ವಿಳಾಸ ಎಂಬುದಿಲ್ಲ. ಆಡಳಿತ ವ್ಯವಸ್ಥೆ ಇವರ ಬದುಕು ಸುಧಾರಣೆಗೆ ಕಣ್ತೆರೆಯಬೇಕಿದೆ


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ