ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಜೀವಜಲ ಒದಗಿಸುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ಕಾಳಮ್ಮವಾಡಿ ಜಲಾಶಯದಲ್ಲಿ ಕಳೆದ ಏಳೆಂಟು ವರ್ಷಗಳಿಂದ ನೀರು ಸೋರಿಕೆ ಆಗುತ್ತಿದ್ದು, ಅಲ್ಲಿನ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಒಂದು ವೇಳೆ ಜಲಾಶಯ ಆಸುಪಾಸು ಪ್ರಬಲ ತೀವ್ರತೆಯ ಭೂಕಂಪ ಸಂಭವಿಸಿದರೆ ಜಲಾಶಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ.
ಕೊಲ್ಲಾಪುರದಲ್ಲಿ ದೂಧಗಂಗಾ ನದಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಒಪ್ಪಂದದಿಂದ ಕಾಳಮ್ಮವಾಡಿ ಜಲಾಶಯ ನಿರ್ಮಿಸಲಾಗಿದೆ. ಮಹಾರಾಷ್ಟ್ರ ಶೇ.80ರಷ್ಟು ಅನುದಾನ ಒದಗಿಸಿದ್ದರೆ, ಕರ್ನಾಟಕ ಶೇ.15ರಷ್ಟು ಅನುದಾನ ನೀಡಿದೆ. ಕೊಲ್ಲಾಪುರ ಜಿಲ್ಲೆಯಲ್ಲಿ ಸುಮಾರು 41 ಸಾವಿರ ಹೆಕ್ಟೆರ್ ಜಮೀನಿಗೆ ವರದಾನವಾಗಿದ್ದರೆ, ಕರ್ನಾಟಕದ ಕೃಷಿ ಭೂಮಿಗೂ ಇದು ಜೀವಜಲವಾಗಿದೆ. ಕರ್ನಾಟಕಕ್ಕೆ ಪ್ರತಿ ವರ್ಷ 4 ಟಿಎಂಸಿ ಅಡಿ ನೀರು ಹರಿದು ಬರುತ್ತದೆ.
ಸದ್ಯ ಕಾಳಮ್ಮವಾಡಿ ಜಲಾಶಯದಲ್ಲಿ ನೀರು ಸೋರಿಕೆ ಆಗುತ್ತಿದ್ದು, ಇದರ ದುರಸ್ತಿಗಾಗಿ ಮಹಾರಾಷ್ಟ್ರ ಸರ್ಕಾರ ಈಗಾಗಲೇ 80 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಲಾಗಿದೆ. ನೀತಿ ಸಂಹಿತೆ ಮುಗಿದ ಬಳಿಕ ಕೆಲಸ ಆರಂಭಿಸಬೇಕೆಂದರೆ ಮುಂಗಾರು ಮಳೆ ಶುರುವಾಗಲಿದೆ. ಹೀಗಾಗಿ ಮುಂದಿನ ವರ್ಷವೇ ಈ
ಕಾಮಗಾರಿ ಆರಂಭವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ 2023, ಆ.15ರಂದು ಕಳೆದ ವರ್ಷದ ಮಳೆಗಾಲ ಮುಗಿಯುತ್ತಿದ್ದಂತೆ ಸೋರಿಕೆ ತಡೆಯುವ ಕಾಮಗಾರಿ ಆರಂಭಿಸುವುದಾಗಿ ಹೇಳಿಕೆ ನೀಡಿದ್ದರು.