ಚಿಕ್ಕೋಡಿ: ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕ ಹಾಗೂ ಬಾಲಕಿಯರ 16 ವಸತಿ ನಿಲಯಗಳು ಇದ್ದು, ಇವುಗಳ ಪೈಕಿ ಚಿಕ್ಕೋಡಿ ಪಟ್ಟಣದ ಬಾಲಕಿಯರ ವಸತಿ ನಿಲಯ ಶಿಥಿಲಗೊಂಡಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ.
ಶಾಲಾ ತರಗತಿಗಳು ಪ್ರಾರಂಭವಾಗುತ್ತಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೇ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ.
ಮೆಟ್ರಿಕ್ ಪೂರ್ವ 13 ಹಾಗೂ ಮೆಟ್ರಿಕ್ ನಂತರದ 3 ವಸತಿ ನಿಲಯಗಳಲ್ಲಿ 2024-25ನೇ ಸಾಲಿನಲ್ಲಿ ವ್ಯಾಸಾಂಗ ಮಾಡುತ್ತಿರುವ ನವೀಕರಣಗೊಂಡ 1497 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಪಟ್ಟಣದ ಇಂದಿರಾ ನಗರ ಬಡಾವಣೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 125 ವಿದ್ಯಾರ್ಥಿಗಳು ಇದ್ದಾರೆ. ಆದರೆ ವಸತಿ ನಿಲಯದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಸಿಮೆಂಟ್ ಹಕ್ಕಳಿಕೆ ಉದುರಿ ಬೀಳುತ್ತಿದೆ. ಛತ್ತಿನಲ್ಲಿನ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿದ್ದರಿಂದ ಯಾವಾಗ ಬೀಳುತ್ತದೆಯೋ ಎಂಬ ಆತಂಕದಲ್ಲಿ ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿ ನಿಲ್ಲಲು ಭಯ ಪಡುತ್ತಿದ್ದಾರೆ.
‘ತುರ್ತಾಗಿ ಬೇರೊಂದು ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ ಸ್ಥಳಾಂತರ ಮಾಡಬೇಕು ಎಂಬ ಆಲೋಚನೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹೊಳೆದಿದೆ. ಎರಡು ತಿಂಗಳ ಕಾಲ ಬೇಸಿಗೆ ರಜಾ ಅವಧಿಯಲ್ಲಿ ಕೈ ಕಟ್ಟಿಕೊಂಡು ಕುಳಿತಿದ್ದ ಅಧಿಕಾರಿಗಳು ಗುಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರು ಎಂಬಂತೆ ಇದೀಗ ಬಾಡಿಗೆ ಕಟ್ಟಡ ಹುಡುಕಾಟದಲ್ಲಿ ತೊಡಗಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ ವಸತಿ ನಿಲಯದ ವಿದ್ಯಾರ್ಥಿನಿಯರ ಪರಿಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ ಕುರಣೆ ಹೇಳಿದರು.