Breaking News

ಬೆಳಗಾವಿ ಜಿಲ್ಲೆಯ 200 ಕೆರೆಗಳಲ್ಲಿ ಹನಿ ನೀರೂ ಇಲ್ಲ

Spread the love

ಬೆಳಗಾವಿ: ‘ನಮ್ಮೂರಾಗಿನ ಎರಡ ಕೆರ್‍ಯಾಗ ನಮ್ಮ ದನಗೋಳಿಗೆ ನೀರ ಕುಡಸತಿದ್ವಿರಿ. ಆದ್ರ ಹೋದ ವರ್ಷ ಮಳಿರಾಯ ಕೈಕೊಟ್ಟ. ಹಂಗಾಗಿ ಒಂದ ಕೆರ್‍ಯಾಗ ಸ್ವಲ್ಪ ನೀರ ಉಳಿದೇತ್ರಿ. ಒಂದ ಪೂರ್ತಿ ಬತ್ತಿಹೋಗೇತ್ರಿ. ಈಗ ದನಗೋಳಿಗೆ ಕುಡ್ಯಾಕ ನೀರ ಹುಡುಕೋದ ನಮಗ್‌ ಕೆಲ್ಸ ಆಗೇತ್ರಿ.

ಕೆರಿ ಮಗ್ಗಲದಾಗ ಇರೋ ಹೊಲದಾಗಿನ ಬೆಳಿಗೋಳ ಒಣಗಾತಾವ್ರಿ…’

ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿಯಲ್ಲಿ ಹಿರೇಬಾಗೇವಾಡಿ-ಸವದತ್ತಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಇರುವ ಕೆರೆದಂಡೆ ಮೇಲೆ ಕುಳಿತಿದ್ದ ಕೃಷಿಕ ವೆಂಕನಗೌಡ ಪಾಟೀಲ ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡಿದ್ದು ಹೀಗೆ.ಬೆಳಗಾವಿ ಜಿಲ್ಲೆಯಲ್ಲಿ ಬರಿದಾದ ಕೆರೆ: 200 ಕೆರೆಗಳಲ್ಲಿ ಹನಿ ನೀರೂ ಇಲ್ಲ

ಇದು ಇವರೊಬ್ಬರ ಸಂಕಷ್ಟ ಮಾತ್ರವಲ್ಲ; ಜಾನುವಾರುಗಳ ದಾಹ ನೀಗಿಸಲು ಮತ್ತು ಅಂತರ್ಜಲ ಮಟ್ಟ ವೃದ್ಧಿಗೆ ಕೆರೆಗಳನ್ನೇ ನೆಚ್ಚಿಕೊಂಡಿದ್ದ ಬಹುತೇಕ ಕೃಷಿಕರ ಗೋಳು.

ಸಪ್ತ ನದಿಗಳು ಹರಿಯುವ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಸೇರಿದ 290 ಕೆರೆಗಳಿವೆ. 30,813 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದ ಈ ಕೆರೆಗಳು, ಗರಿಷ್ಠ 3236.72 ಎಂಸಿಎಫ್‌ಟಿ(ಮೀಟರ್‌ ಕ್ಯುಬಿಕ್‌ ಅಡಿ) ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ.

2023ರ ಮೇ 15ರಂದು 116 ಕೆರೆ ಬರಿದಾಗಿದ್ದವು. ಈ ಬಾರಿ ಮೇ 15ರಂದು 200 ಕೆರೆಗಳಲ್ಲಿ ಹನಿ ನೀರೂ ಇಲ್ಲ. ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಖಾಲಿಯಾದ ಕೆರೆಗಳ ಸಂಖ್ಯೆ ದುಪ್ಪಟ್ಟಾಗಿದೆ.

ಕಳೆದೊಂದು ವಾರದಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ರೈತರಲ್ಲಿ ಒಂದಿಷ್ಟು ಆಶಾಭಾವ ಮೂಡಿಸಿದೆ. ಈ ಬಾರಿ ವರುಣ ಕೈಹಿಡಿಯುತ್ತಾನೆ. ಕೆರೆಯೊಡಲಿಗೆ ಜೀವಜಲ ಹರಿದುಬರುತ್ತದೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಸವದತ್ತಿ, ಅಥಣಿಯಲ್ಲೇ ಹೆಚ್ಚು: 42 ಕೆರೆಗಳನ್ನು ಹೊಂದಿದ ಹುಕ್ಕೇರಿ ತಾಲ್ಲೂಕಿನಲ್ಲಿ 21 ಕೆರೆ(ಶೇ 50) ಬರಿದಾಗಿವೆ. 14 ಕೆರೆ ಹೊಂದಿದ ಬೈಲಹೊಂಗಲದಲ್ಲಿ 2, 9 ಕೆರೆಗಳಿರುವ ಗೋಕಾಕದಲ್ಲಿ 2 ಕೆರೆ ಬತ್ತಿವೆ. ಆದರೆ, ತಲಾ 36 ಕೆರೆಗಳನ್ನು ಹೊಂದಿದ ಸವದತ್ತಿ ಮತ್ತು ಅಥಣಿ ತಾಲ್ಲೂಕಿನಲ್ಲಿ ಒಂದೇ ಕೆರೆಯಲ್ಲೂ ನೀರಿಲ್ಲ. ಪಶ್ಚಿಮಘಟ್ಟದ ಸೆರಗಿನಲ್ಲಿರುವ ಖಾನಾಪುರದಲ್ಲಿ 28, ರಾಮದುರ್ಗದಲ್ಲಿ 24 ಕೆರೆಗಳ ಒಡಲು ಬರಿದಾಗಿದೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ