ಬೆಂಗಳೂರು: ತಹಶೀಲ್ದಾರ್ ಕಚೇರಿಯಲ್ಲಿನ ರೆಕಾರ್ಡ್ ರೂಮ್ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ. ಕೆಲವು ಹಳೆ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ಇನ್ನೂ ಕೆಲ ದಾಖಲೆಗಳು ಕಳೆದು ಹೋಗುತ್ತಿವೆ. ಕೆಲವು ಖಾಸಗಿ ವ್ಯಕ್ತಿಗಳು ರೆಕಾರ್ಡ್ ರೂಮ್ಗೆ ಹೋಗಿ ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೆಕಾರ್ಡ್ ರೂಮ್‌ನಲ್ಲಿನ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲು ನಿರ್ಧರಿಸಿದ್ದೇವೆ. ಇಲ್ಲಿರುವ ಹಳೆ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ನಿತ್ಯ ಮಾಹಿತಿ ಮತ್ತು ದಾಖಲೆ ಪ್ರತಿ ಪಡೆಯಲು ಜನರು ಹರಸಾಹಸಪಡುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಲು ರೆಕಾರ್ಡ್ ರೂಮ್ನ ಹಳೆ ದಾಖಲೆಗಳ ಸ್ಕ್ಯಾನಿಂಗ್ ಮಾಡಲಿದ್ದೇವೆ ಎಂದರು.
ಪ್ರಾಯೋಗಿಕವಾಗಿ ಕೆಲ ತಾಲೂಕು ಕಚೇರಿಗಳಲ್ಲಿನ ರೆಕಾರ್ಡ್ ರೂಮ್ನ ದಾಖಲೆಗಳ ಡಿಜಿಟಲೀಕರಣ ಮಾಡುವ ಕೆಲಸ ಮಾಡಿದ್ದೇವೆ. ಜನವರಿ ಬಳಿಕ ಎಲ್ಲಾ ರೆಕಾರ್ಡ್ಗಳನ್ನು ಮಿಷನ್ ಮೋಡ್ನಲ್ಲಿ ಸ್ಕ್ಯಾನಿಂಗ್ ಮಾಡಲಿದ್ದೇವೆ. ಈ ಮೂಲಕ ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 2.40 ಕೋಟಿ ಪಹಣಿ ಇದೆ. 3.80 ಕೋಟಿ ಖಾತೆದಾರರು ಇದ್ದಾರೆ. ಒಂದು ತಾಲೂಕಿನ ರೆಕಾರ್ಡ್ ಸ್ಕ್ಯಾನಿಂಗ್ ಮಾಡಲು ಸುಮಾರು 50 ಲಕ್ಷ ರೂಪಾಯಿ ಬೇಕು. ಕೇಂದ್ರದಿಂದಲೂ ಸಹಕಾರ ಕೇಳುತ್ತೇವೆ ಎಂದು ತಿಳಿಸಿದರು.
ಆರ್ಟಿಸಿ-ಆಧಾರ್ ಲಿಂಕ್‌ಗೆ ಚಿಂತನೆ: ಆರ್ಟಿಸಿಗೆ ಆಧಾರ್ ಲಿಂಕ್ ಮಾಡಲು ಚಿಂತನೆ ನಡೆದಿದೆ. ಈ ಸಂಬಂಧ ಇಲಾಖೆ ತಂತ್ರಾಂಶ ಅಭಿವೃದ್ಧಿಪಡಿಸುತ್ತಿದೆ. ಆರ್ಟಿಸಿ ನಿಜವಾದ ಜಮೀನು ಮಾಲೀಕನಿಗೆ ಆಧಾರ್ ಜೋಡಣೆ ದೃಢೀಕರಣ ಆಗಬೇಕು. ಈ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಕೇಂದ್ರದ ಬಳಿ ಇರುವ ದತ್ತಾಂಶದ ಮಾಹಿತಿ ಪ್ರಕಾರ, ರಾಜ್ಯದ 44% ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಪರಿಹಾರಕ್ಕೆ ಒಳಪಡುತ್ತಾರೆ. ಆದರೆ, ಕೇಂದ್ರದ ದತ್ತಾಂಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರವು ನೀವು ಆರ್ಟಿಸಿಯನ್ನು ಆಧಾರ್ ಕಾರ್ಡ್ಗೆ ಜೋಡಣೆ ಮಾಡಿದರೆ ನೀವು ನೀಡುವ ಸಣ್ಣ ಮತ್ತು ಅತಿ ಸಣ್ಣ ರೈತರ ದತ್ತಾಂಶವನ್ನು ಪರಿಹಾರಕ್ಕಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ ಎಂದು ವಿವರಿಸಿದರು.