ಈ ಜಿಲ್ಲೆ ಬರಪೀಡಿತ ಜಿಲ್ಲೆ ಅಂತಲೇ ಹಣೆ ಪಟ್ಟಿ ಕಟ್ಟಿ ಕೊಂಡಿದೆ, ಈ ಜಿಲ್ಲೆಯ ರೈತರು ಕೆಲವೊಮ್ಮೆ ಅತೀವೃಷ್ಠಿಗೆ ತುತ್ತಾದರೂ ಇನ್ನೂ ಕೆಲವೊಮ್ಮೆ ಅನಾವೃಷ್ಟೀಗೆ ತುತ್ತಾಗುತ್ತಾರೆ, ಶಾಶ್ವತ ಬರ ಪೀಡಿತ ಜಿಲ್ಲೆ ಅಂತಾನೇ ಹಣೆ ಪಟ್ಟಿ ಕಟ್ಟಿಕೊಂಡ ಜಿಲ್ಲೆಯಲ್ಲಿ ರೈತರನೊರ್ವ ಬರಡು ಭೂಮಿಯಲ್ಲಿ ಕಾಲುವೆ ನೀರನ್ನು ಬಳಸಿ ಉತ್ತಮ ಪೇರು ಬೆಳೆದು ಒಳ್ಳೆಯ ಲಾಭ ಗಳಿಸುವದರ ಜೊತೆಗೆ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…
ಗುಮ್ಮಟ ನಗರಿ ವಿಜಯಪುರ ಜಿಲ್ಲೆ ಶಾಶ್ವತ ಬರ ಪೀಡಿತ ಜಿಲ್ಲೆ ಎಂದು ಹಣೆ ಪಟ್ಟಿ ಕಟ್ಟಿಕೊಂಡಿದೆ. ಇಂತಹ ಬರ ಪೀಡಿತ ಜಿಲ್ಲೆಯ ಬರಡು ಭೂಮಿಯಲ್ಲಿ ರೈತನೊರ್ವ ಪೇರು ಬೆಳೆದು ಉತ್ತಮಲಾಭ ಗಳಿಸುತ್ತಿದ್ದಾನೆ. ಹೌದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ತಾಂಡಾದ ರೈತ ತುಕಾರಾಮ ಪವ್ಹಾರ ಎಂಬಾತರು ತಮಗಿರುವ ನಾಲ್ಕು ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ಪೇರು ಬೆಳೆದಿದ್ದಾರೆ. ಇನ್ನೂ ಇವರ ಭೂಮಿ ಸಂಪೂರ್ಣವಾಗಿ ಬರಡು ಭೂಮಿಯಾಗಿದ್ದು ಸುಮಾರು ದಿನಗಳ ಕಾಲ ಭೂಮಿಯನ್ನು ಸ್ವಚ್ಚಗೊಳಿಸಿಕೊಂಡು ಸಣ್ಣ ಹೊಂಡವನ್ನು ತೋಡಿ ಪೇರು ಬೆಳೆದಿದ್ದಾರೆ. ಇನ್ನೂ ತೋಟಗಾರಿಕಾ ಇಲಾಖೆಯಿಂದ ಸದುಪಯೋಗ ಪಡೆದುಕೊಂಡು ಸಸಿಗಳನ್ನು ಹಾಗೂ ಡ್ರಿಪ್ ಗೆ ಅನುದಾನ ಪಡೆದು ಗಿಡಗಳನ್ನು ನೆಟ್ಟಿದ್ದಾರೆ. ಒಂದೇ ವರ್ಷದ ಒಳಗೆ ರೈತ ತುಕಾರಾಮ ಪವಾರ್ ಅವರು ಬೆಳೆದ ಪೇರು ಈಗಫಲ ನೀಡುತ್ತಿದ್ದು, ಸೀಜನ್ ನಲ್ಲಿ ಪ್ರತಿದಿನ ಸುಮಾರ 20 ಟ್ರೇ ನಷ್ಟು ಪೇರು ತೆಗೆದು ಮಾರಿದರೆ ಈಗ ಎರಡು ದಿನಕ್ಕೊಮ್ಮೆ 20 ಟ್ರೇ ನಷ್ಟು ಪೇರು ತಗೆದು ಮಾರಾಟ ಮಾಡಿ ಉತ್ತಮ ಲಾಭ ಗಳಿಸಿ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಇನ್ನೂ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯಿಂದಾಗಿ ಇಟ್ಟಂಗಿಹಾಳ ಗ್ರಾಮದಲ್ಲಿ ತುಕಾರಾಮ ಪವಾರ, ಭೀಮಾಬಾಯಿ ರೈತ ದಂಪತಿ ಬಂಪರ್ ಪೇರಲೆ ಹಣ್ಣು ಬೆಳೆದು ಮಾರಾಟ ಮಾಡಿ ನಿತ್ಯ ಆದಾಯ ಗಳಿಸುತ್ತಿದ್ದಾರೆ. ಮೊದಲು ಒಣಬೇಸಾಯದಲ್ಲಿ ಹುರುಳಿ, ಮೂಕಣಿ ಕಾಳು, ಶೇಂಗಾ, ಸಜ್ಜೆ ಮತ್ತು ಜೋಳವನ್ನು ಮೊದಲು ಇವರು ಬೆಳೆಯುತ್ತಿದ್ದರು. ಸಕಾಲಕ್ಕೆ ಮಳೆ ಇಲ್ಲದೇ, ಬೆಳೆದ ಬೆಳೆಗೆ ತಕ್ಕ ಬೆಲೆಯೂ ಸಿಗದೆ ನಷ್ಟ ಅನುಭವಿಸಿದ್ದರು. ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆ ಈ ಭಾಗದಲ್ಲಿ ಸಾಕಾರಗೊಂಡ ಪರಿಣಾಮ ರೈತರ ಆದಾಯ ದ್ವಿಗುಣ ಆಗುತ್ತಿದೆ. ಸಚಿವ ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿರೋ ಪರಿಣಾಮ ರೈತರ ಬದುಕು ಹಸನಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪೇರಲ ಹಣ್ಣಿಗೆ ಪ್ರತಿ ಕೆ.ಜಿಗೆ 45 ರಿಂದ 50 ಬೆಲೆ ಇದೆ, ಪ್ರತಿ ದಿನವೂ ವಿಜಯಪುರ . ನಗರದ ವಿವಿಧೆಡೆ ಮಾರಾಟ ಮಾಡುತ್ತಾರೆ. ಹೀಗೆ ಕಳೆದ 5-6 ತಿಂಗಳಿನಿಂದ ಸುಮಾರು 1 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾರೆ.
ಒಟ್ನಲ್ಲಿ ಕೈ ಲಾಗದು ಎಂದು ಕೈ ಕಟ್ಟು ಕುಳಿತರೆ ಸಾಗದು ಕೆಲಸ ಮುಂದೆ ಎಂಬ ಡಾ.ರಾಜಕುಮಾರ ಅವರ ಹಾಡಿನಂತೆ ಬರಡು ಭೂಮಿ ಇಲ್ಲಿ ಬರೀ ಕಲ್ಲಿದೆ ಎಂದು ಕೊಂಡಿದ್ದರೆ ಇಲ್ಲಿ ಏನೂ ಮಾಡಲು ಆಗುವದಿಲ್ಲ ಎಂದು ಸುಮ್ಮನೆ ಕುಳಿತಿದ್ದರೆ ರೈತ ತುಕಾರಾಮ ಕೂಡಾ ಎನೂ ಮಾಡಲಾಗುತ್ತಿರಲಿಲ್ಲ, ಪ್ರಯತ್ನಕ್ಕೆ ಫಲ ಕಟ್ಟಿಟ್ಟ ಬುತ್ತಿ ಎಂಬಂತೆ ಬರಡು ಭೂಮಿಯಲ್ಲಿ ಪೇರು ಬೆಳೆದು ಇತರೆ ರೈತರಿಗೆ ಮಾದರಿ ಆಗಿರುವ ತುಕಾರಾಮ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವೇ ಸರಿ.