ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡಬ್ಬಲ್ ಡೆಕ್ಕರ್ ಬಸ್ಗಳ ಜಮಾನ ಮತ್ತೆ ಶುರುವಾಗಲಿದೆ. ಪ್ರಾಯೋಗಿಕವಾಗಿ ಐದು ಮಾರ್ಗದಲ್ಲಿ ಡಬ್ಬಲ್ ಡೆಕ್ಕರ್ ಬಸ್ಗಳು ಸಂಚರಿಸಲಿವೆ.
ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಸಾರವಾಗಿ ಬಸ್ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಲಾಸಿಪಾಳ್ಯ ಟಿಟಿಎಂಸಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಬ್ಬಲ್ ಡೆಕ್ಕರ್ ಬಸ್ಗಳಿಗೆ ಟೆಂಡರ್ ಕರೆಯಲಾಗಿದೆ. ಒಂದು ವಾರದಲ್ಲಿ ಟೆಂಡರ್ ಪೂರ್ಣವಾಗಲಿದೆ. ಮೊದಲ ಹಂತವಾಗಿ 5 ಡಬ್ಬಲ್ ಡೆಕ್ಕರ್ ಬಸ್ಗಳನ್ನು ರಸ್ತೆಗಿಳಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಐದು ಮಾರ್ಗ ರೂಪಿಸಲಾಗಿದೆ. ಅಂಡರ್ ಪಾಸ್ ಸ್ಕೈವಾಕರ್ ನೋಡಿಕೊಂಡು ಯಾವುದೇ ಅಡೆ ತಡೆ ಇಲ್ಲದೇ ಡಬ್ಬಲ್ ಡೆಕ್ಕರ್ ಬಸ್ ಸಂಚರಿಸವುಂತೆ ಮಾರ್ಗ ರೂಪಿಲಾಗಿದೆ. ಮಕ್ಕಳಿಗೆ ಈ ಬಸ್ ಹೆಚ್ಚಿನ ಖುಷಿ ನೀಡಲಿದೆ, ಪ್ರವಾಸಿಗರಿಗೂ ಅನುಕೂಲವಾಗಲಿದೆ ಎನ್ನುತ್ತ, ನಾವೆಲ್ಲ ಕಾಲೇಜು ದಿನಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ನ ಮೇಲ್ಬಾಗದಲ್ಲಿ ಕುಳಿತು ಸಂಚಾರ ಮಾಡಿದ್ದೆವು ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.
ಅವಶ್ಯಕತೆಗೆ ತಕ್ಕಂತೆ ಬಸ್ ವಿನ್ಯಾಸ : ಡಬ್ಬಲ್ ಡೆಕ್ಕರ್ ಬಸ್ಗಳಿಗೆ ಬಿಎಂಟಿಸಿ ಬಸ್ನ ಬಣ್ಣವನ್ನೇ ಅಂತಿಮಗೊಳಿಸಲಾಗಿದೆ. ಆದರೆ, ಡಬ್ಬಲ್ ಡೆಕ್ಕರ್ ಬಸ್ ವಿನ್ಯಾಸದ ಬಗ್ಗೆ ಚರ್ಚೆ ನಡೆದಿದೆ. ಜಪಾನ್ನ ಡಬ್ಬಲ್ ಡೆಕ್ಕರ್ ಬಸ್ ಮಾದರಿಯನ್ನು ನನ್ನ ಆಪ್ತರು ಕಳಿಸಿದ್ದರು, ಅದನ್ನು ನಾನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕಳಿಸಿಕೊಟ್ಟಿದ್ದೇನೆ. ನಮ್ಮ ಯೋಜಿತ ವಿನ್ಯಾಸ ಹಾಗೂ ಜಪಾನ್ ಮಾದರಿಯನ್ನೆಲ್ಲ ನೋಡಿ, ಇಲ್ಲಿನ ಅವಶ್ಯಕತೆಗೆ ತಕ್ಕಂತೆ ವಿನ್ಯಾಸ ಅಂತಿಮಗೊಳಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.